ತಂದೆ, ತಾಯಿಗೆ ಗೌರವ ತರುವ ಸಾಧನೆ ಮಾಡಿ

5bhr 1
Published on

ಬಾಳೆಹೊನ್ನೂರು: ವಿದ್ಯಾರ್ಥಿಗಳು ತಮ್ಮ ತಂದೆ, ತಾಯಿಗೆ ಗೌರವ ತರುವ ಸಾಧನೆಗಳನ್ನು ಮಾಡಬೇಕು ಎಂದು ಬಿ.ಕಣಬೂರು ಗ್ರಾಪಂ ಅಧ್ಯಕ್ಷ ರವಿಚಂದ್ರ ಹೇಳಿದರು.

ಪಟ್ಟಣದ ಕಡ್ಲೇಮಕ್ಕಿಯ ಸರ್ಕಾರಿ ಸ್ವತಂತ್ರ ಪಿಯು ಕಾಲೇಜು ಆಯೋಜಿಸಿದ್ದ ಕಾಲೇಜಿನ ವಾರ್ಷಿಕ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿನ ಕಾಲದ ಶಿಕ್ಷಣ ವ್ಯವಸ್ಥೆ ಬಹಳ ಕಷ್ಟಕರವಾಗಿತ್ತು. ಇಂದು ವಿದ್ಯಾರ್ಥಿಗಳಿಗೆ ಹಲವು ಸೌಲಭ್ಯ, ಮೂಲಭೂತ ಸೌಕರ್ಯದೊರೆಯುತ್ತಿದೆ. ಅವುಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ತಂದೆ ತಾಯಿಗಳಿಗೆ ಗೌರವ ಸಿಗುವಂತೆ ನೋಡಿಕೊಳ್ಳಬೇಕಾಗಿರುವುದು ನಮ್ಮ ಕರ್ತವ್ಯ. ದಿನಕ್ಕೆ ಕನಿಷ್ಠ ಆರು ಗಂಟೆ ಓದಿ ಜೀವನದಲ್ಲಿ ಸಾಧನೆ ಮಾಡಬೇಕು. ಸಮಯ ವ್ಯರ್ಥ ಮಾಡದೆ ಪಿಯುಸಿಯಲ್ಲಿ ಸಾಧನೆ ಮಾಡಬೇಕು ಎಂದರು.

ಕಾಲೇಜು ಸಮಿತಿ ಕಾರ್ಯಾಧ್ಯಕ್ಷ ಎಂ.ಎಸ್.ಜಯಪ್ರಕಾಶ್ ಮಾತನಾಡಿ, ವಿದ್ಯಾರ್ಥಿಗಳಿಗೆ ಪಿಯುಸಿ ಪ್ರಮುಖ ಘಟ್ಟವಾಗಿದ್ದು, ಪರೀಕ್ಷೆ ಸಂದರ್ಭದಲ್ಲಿ ಓದಿನತ್ತ ಗಮನಹರಿಸಬೇಕು. ಸರ್ಕಾರಿ ಕಾಲೇಜಿಗೆ ಗ್ರಾಮೀಣ ಭಾಗದಿಂದಲೇ ಹೆಚ್ಚು ವಿದ್ಯಾರ್ಥಿಗಳು ಬರುತ್ತಿದ್ದು, ರೈತರು, ಕೂಲಿ ಕಾರ್ಮಿಕರ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಓದಿನಲ್ಲಿ ಸಾಧನೆ ಮಾಡಿ ಅವರಿಗೆ ಗೌರವ ತರಬೇಕು. ಯಾರನ್ನೋ ನಾಯಕರನ್ನಾಗಿ ಮಾಡದೇ ತಾವುಗಳೇ ನಾಯಕರಾಗಬೇಕು ಎಂದು ತಿಳಿಸಿದರು.

ಗ್ರಾಪಂ ಸದಸ್ಯೆ ಶಶಿಕಲಾ ಉಮೇಶ್, ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಜಾಹ್ನವಿ, ಕಾರ್ಯದರ್ಶಿ ಸವಿತಾ, ಜಿಲ್ಲಾ ಚುಸಾಪ ಅಧ್ಯಕ್ಷ ಯಜ್ಞಪುರುಷಭಟ್, ಉಪನ್ಯಾಸಕರಾದ ಮಮತಾ, ಉಷಾ, ಮಾಲತಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net