ನಿರ್ವಹಣೆ ಕೊರತೆಯಿಂದ ಅಪಘಾತ ಹೆಚ್ಚಳ

20 KRT SHARNAPPA 03
ಕಾರಟಗಿ ಪಟ್ಟಣದ ಹೆದ್ದಾರಿ ಬಲ ಹಾಗೂ ಎಡ ಬದಿಗಳಲ್ಲಿ ವೈಟ್ ಟ್ಯಾಪಿಂಗ್ ಹಾಗೂ ರಸ್ತೆ ಮಧ್ಯೆ ರೋಡ್ ರಿಫ್ಲೈಕ್ಟರ್ ಗಳು ಇಲ್ಲದಿರುವುದು.
Published on

ಕಾರಟಗಿ:ತಾಲೂಕು ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಅಪಘಾತ ಪ್ರಕರಣಗಳು ಹೆಚ್ಚುತ್ತಿದ್ದು, ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಈ ಬಗ್ಗೆ ಕ್ರಮವಹಿಸಬೇಕಿದೆ.

ತಾಲೂಕು ಕೇಂದ್ರದಿಂದ ಹೈದರಾಬಾದ್ ಹಾಗೂ ಹುಬ್ಬಳ್ಳಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಿದೆ (ಎಸ್. ಎಚ್ 23) . ಹೀಗಾಗಿ ನಿತ್ಯ ನೂರಾರು ವಾಹನಗಳು ಈ ರಸ್ತೆ ಮಾರ್ಗವಾಗಿ ಸಂಚಾರ ನಡೆಸುತ್ತವೆ.

ಆದರೆ, ರಸ್ತೆಯ ಮಾರ್ಗ ಮಧ್ಯದಲ್ಲಿ ತಿರುವು ಎಲ್ಲಿದೆ?, ಶಾಲಾ ಕಟ್ಟಡಗಳು ಎಲ್ಲಿವೆ ?, ವೇಗದ ಪರಿಮಿತಿ ಎಷ್ಟು?, ಯಾವ ಭಾಗದಲ್ಲಿ ರಸ್ತೆ ವಿಭಾಗವಾಗುತ್ತವೆ ಎನ್ನುವುದು ಸೇರಿ ಇತರೆ ಪ್ರಮುಖ ನಾಮ ಫಲಕಗಳು ಇಲ್ಲದಿರುವುದು ಸಹ ರಸ್ತೆ ಅಪಘಾತಕ್ಕೆ ಕಾರಣವಾಗಿದೆ ಎನ್ನುವ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತವೆ.

ರಸ್ತೆ ನಿರ್ಮಾಣ ಹಾಗೂ ನಿರ್ವಹಣೆಗಾಗಿಯೇ ಗಂಗಾವತಿ ತಾಲೂಕಿನ ಮರಳಿ ಬಳಿ ಟೋಲ್ ಗೇಟ್ ಇದೆ. ಆದರೆ, ಸಮರ್ಪಕ ರೀತಿಯಲ್ಲಿ ಟೋಲ್ ಸಿಬ್ಬಂದಿ ಈವರೆಗೆ ರಸ್ತೆ ನಿರ್ವಹಣೆ ಮಾಡಿಲ್ಲ ಎನ್ನುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ಪ್ರಮುಖವಾಗಿ ರಸ್ತೆಯ ಮಧ್ಯ ಭಾಗದಲ್ಲಿ ಅದರಲ್ಲೂ ತಿರುವುಗಳಲ್ಲಿ ಪದೇ,ಪದೆ ಅಪಘಾತಗಳು ಉಂಟಾಗುವ ಪ್ರದೇಶದಲ್ಲಿ ರಿಫ್ಲೇಕ್ಟರ್‌ಗಳನ್ನು ಹಾಗೂ ರಸ್ತೆಯ ಎರಡೂ ಬದಿಗಳಲ್ಲಿ ವಾಹನ ಸವಾರರ ಸಂಚಾರಕ್ಕೆ ಅನುಕೂಲವಾಗಲು ವೈಟ್ ಟ್ಯಾಪಿಂಗ್ ವ್ಯವಸ್ಥೆ ಮಾಡಬೇಕು. ರಸ್ತೆ ಬದಿಗಳಲ್ಲಿನ ಮಣ್ಣನ್ನು ಸಹ ಸ್ವಚ್ಛ ಮಾಡಬೇಕು. ಬಹುತೇಕ ಕಡೆ ಈ ಕೆಲಸಗಳು ಆಗಿಲ್ಲ.

ಈ ಎಲ್ಲ ಕೆಸಲಗಳು ಆದರೆ, ಇವುಗಳಿಂದ ಅಪಘಾತ ಪ್ರಕರಣಗಳ ಸಂಖ್ಯೆಯನ್ನು ತಗ್ಗಿಸಲು ಸಾಧ್ಯವಾಗುತ್ತದೆ ಎನ್ನುವುದು ಜನರ ಆಶಯ. ಬಹಳ ವಷರ್ಗಳ ಹಿಂದೆ ತಾಲೂಕಿನಲ್ಲಿ ಕಚ್ಚಾ ರಸ್ತೆಗಳಿದ್ದವು. ಆಗ ತಗ್ಗು-ಗುಂಡಿಗಳ ಹಾವಳಿಯಿಂದ ವಾಹನಗಳು ನಿಧಾನವಾಗಿ ಸಾಗುತ್ತಿದ್ದವು. ಈಗ ಕಾಲ ಉರುಳಿದಂತೆ ರಸ್ತೆಗಳು ಅಭಿವೃದ್ಧಿ ಕಂಡಿವೆ. ಈ ಹಿಂದಿನ ಕಚ್ಚಾ ರಸ್ತೆಗಳು ಮೈತುಂಬ ಡಾಂಬಾರು ತುಂಬಿಕೊಂಡು ಹೆದ್ದಾರಿಯಾಗಿ ಪರಿವರ್ತನೆಯಾಗಿವೆ. ವಷರ್ದಿಂದ ವಷರ್ಕ್ಕೆ ವಾಹನಗಳ ಓಡಾಟ ಹೆಚ್ಚುತ್ತಿದೆ. ರಸ್ತೆಗಳ ಅಭಿವೃದ್ಧಿಗೆ ಗಮನ ನೀಡುವ ಸರ್ಕಾರ ಹಾಗೂ ಅಧಿಕಾರ ವರ್ಗ ರಸ್ತೆಯ ನಿರ್ವಹಣೆ ಬಗ್ಗೆಯೂ ಗಮನ ಹರಿಸಿದಲ್ಲಿ ಅಪಘಾತ ಪ್ರಕರಣಗಳನ್ನು ನಿಯಂತ್ರಿಸಬಹುದು.

ಹೆಲ್ಮೆಟ್ ಮರೆತ ವಾಹನ ಸವಾರರು

ರಸ್ತೆ ಅಪಘಾತ ಗಳಲ್ಲಿ ಕಾರು, ದೊಡ್ಡ ವಾಹನಗಳಿಗೆ ಹೋಲಿಕೆ ಮಾಡಿದರೆ ಬೈಕ್ ಸವಾರರೇ ಹೆಚ್ಚಿನ ಸಂಖ್ಯೆಯಲ್ಲಿ ಮೃತಪಡುತ್ತಿದ್ದಾರೆ. ಬೈಕ್ ಖರೀದಿಗೆ ಲಕ್ಷಾಂತರ ರೂ. ವ್ಯಯಿಸುವ ನಾವು ಸಾವಿರಾರು ರೂ. ಬೆಲೆಯ ಹೆಲ್ಮೆಟ್ ಧರಿಸಲು ಹಿಂದೆ-ಮುಂದೆ ನೋಡುವ ಪರಿಸ್ಥಿತಿಯಲ್ಲಿದ್ದೇವೆ. ಇದರಿಂದ ಆಪಘಾತಗಳು ನಡೆದರೂ ಸಹ ಪ್ರಾಣಾಪಾಯದಿಂದ ಪಾರಾಗಬಹುದು. ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಪ್ರಯಾಣಿಸುವುದರಿಂದ ಅಪಘಾತ ಪ್ರಕರಣಗಳಲ್ಲಿ ಹೆಲ್ಮೆಟ್ ಜೀವರಕ್ಷಕವಾಗಿ ಕೆಲಸ ಮಾಡಲಿದೆ.

ಎಚ್ಚರಿಕೆಯಿಂದ ಗಾಡಿ ನಡೆಸಲಿ

ಕಾರಟಗಿ ತಾಲೂಕು ವ್ಯಾಪ್ತಿಯಲ್ಲಿ ಕಳೆದ ಎರಡೂವರೆ ವಷರ್ದಲ್ಲಿ ನೂರಾರು ರಸ್ತೆ ಅಪಘಾತಗಳು ನಡೆದಿವೆ. ಪ್ರಮುಖವಾಗಿ ರಸ್ತೆಯ ತಿರುವುಗಳಲ್ಲಿ ಸೇರಿ ಇತರೆಡೆ ಅಪಘಾತಗಳು ಸಂಭವಿಸುತ್ತಿವೆ. ತಡವಾದರೂ ಸರಿ, ರಸ್ತೆ ತಿರುವಿನಲ್ಲಿ ಎಚ್ಚರಿಕೆಯಿಂದ ಸವಾರರು ವಾಹನ ಚಾಲನೆ ಮಾಡಬೇಕು.

ವಾಹನ ಸವಾರರು ಮೊದಲು ಸಂಚಾರಿ ನಿಯಮಗಳನ್ನು ಪಾಲಿಸಬೇಕು. ವಾಹನ ಚಾಲನೆ ವೇಳೆ ಸಂಯಮ ಬಹಳ ಮುಖ್ಯ. ಇದರ ಜೊತೆಗೆ ತ್ರಿಬಲ್ ರೈಡಿಂಗ್ ಹೋಗಬಾರದು.

ಸುಧೀರ್ ಬೆಂಕಿ

ಪಿ.ಐ, ಕಾರಟಗಿ

ಸಾರ್ವಜನಿಕರಿಂದ ರಸ್ತೆ ನಿರ್ವಹಣೆಗೆ ಟೋಲ್ ಸಿಬ್ಬಂದಿ ಹಣ ಪಡೆಯುತ್ತಾರೆ. ಆದರೆ, ಸಮರ್ಪಕ ರೀತಿಯಲ್ಲಿ ರಸ್ತೆ ನಿರ್ವಹಣೆ ಮಾಡಿಲ್ಲ. ರಸ್ತೆಗಳಲ್ಲಿ ರಿಫ್ಲೈಕ್ಟರ್ ಗಳು ಹಾಗೂ ವೈಟ್ ಟ್ಯಾಪಿಂಗ್, ಸೂಚನಾ ಫಲಕಗಳಿಲ್ಲ. 35-40 ಕಿ.ಮೀ ಅಂತರದಲ್ಲಿಯೇ ಎರಡು ಟೋಲ್ ಗೇಟ್ ಗಳಿವೆ. ಇವುಗಳ ನಿರ್ಮಾಣಕ್ಕೆ ಕಾನೂನಿನಲ್ಲಿ ಅವಕಾಶವಿದೆಯೇ ? ಸಂಬಂದ್ಧಪಟ್ಟ ಅಧಿಕಾರಿಗಳು ಈ ಬಗ್ಗೆ ಶೀಘ್ರ ಶಿಸ್ತು ಕ್ರಮಕೈಗೊಳ್ಳಲಿ

ಪ್ರವೀಣ್ ಕುಮಾರ್ ಹೊಸಮನಿ

ವಕೀಲರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net