ರಾಜ್ಯಕ್ಕೆ ಅಪಘಾತ ಆಘಾತ, ದಿನಕ್ಕೆ ಸರಾಸರಿ 30 ಮಂದಿ ಸಾವು, 151 ಜನರಿಗೆ ಗಾಯ, 2024ರಲ್ಲಿ 40 ಸಾವಿರ ದಾಟಿದ ಆಕ್ಸಿಡೆಂಟ್

dharwad accidents
Published on

ತಿಪ್ಣಣ್ಣ ಅವಧೂತ ಹುಬ್ಬಳ್ಳಿ

ರಾಜ್ಯದಲ್ಲಿ ದಿನಕ್ಕೆ ಸರಾಸರಿ 30 ಜನರ ಸಾವು, 151 ಮಂದಿಗೆ ಗಾಯ. ವರ್ಷದಲ್ಲೇ 40 ಸಾವಿರ ದಾಟಿದ ಅಪಘಾತ ಪ್ರಕರಣಗಳಿಂದ ಕರ್ನಾಟಕಕ್ಕೆ ಆಘಾತ ಎದುರಾಗಿದೆ.

ಸಂಚಾರ ನಿಯಮಗಳಲ್ಲಿ ಕಟ್ಟುನಿಟ್ಟು, ವೇಗದ ವಾಹನ ಚಾಲನೆಗೆ ಕಡಿವಾಣ ಹೀಗೆ ರಸ್ತೆ ನಿಯಮ ಪಾಲನೆ ಕುರಿತು ಪೊಲೀಸರು ಎಷ್ಟೇ ಜಾಗೃತಿ ಮೂಡಿಸಿದರೂ ಅಪಘಾತಗಳ ಸಂಖ್ಯೆ ಹೆಚ್ಚುತ್ತಲೇ ಸಾಗುತ್ತಿವೆ. ಜತೆಗೆ ಪ್ರಾಣ ಹಾನಿ ಪ್ರಮಾಣದಲ್ಲೂ ಏರಿಕೆ ಕಾಣುತ್ತಿದೆ.

ರಾಜ್ಯದಲ್ಲಿ 2020ರಲ್ಲಿ ಒಟ್ಟಾರೆ 34178 ಅಪಘಾತ ಸಂಭವಿಸಿ 39492 ಜನರು ಗಾಯಗೊಂಡಿದ್ದರೆ, 9760 ಜನರು ಸಾವಿಗೀಡಾಗಿದ್ದರು. 2023ರ ವೇಳೆಗೆ 43440 ಅಪಘಾತಗಳಾಗಿ 52547 ಮಂದಿ ಗಾಯಗೊಂಡಿದ್ದರೆ, 12321 ಜನರು ಮೃತರಾಗಿದ್ದಾರೆ. ಇನ್ನು ಪ್ರಸಕ್ತ ವರ್ಷ ನವೆಂಬರ್ ವರೆಗೆ 39,296 ಅಪಘಾತಗಳಾಗಿ 50,054 ಪ್ರಯಾಣಿಕರು ಗಾಯಗೊಂಡಿದ್ದರೆ, 10,078 ಜನರು ಮೃತಪಟ್ಟಿದ್ದಾರೆ.

ಎನ್​ಎಚ್, ಎಸ್​ಎಚ್​ಗಳಲ್ಲಿ ಕಡಿಮೆ ಅಪಘಾತ:  ಕರ್ನಾಟಕದಲ್ಲಿ 7154 ಕಿ.ಮೀ. ರಾಷ್ಟ್ರೀಯ ಹೆದ್ದಾರಿ, 27900 ಕಿ.ಮೀ. ರಾಜ್ಯ ಹೆದ್ದಾರಿ ಹಾಗೂ 56164 ಕಿ.ಮೀ. ಇತರೆ ರಸ್ತೆಗಳಿವೆ. ಈ ವರ್ಷ ಜನವರಿಯಿಂದ ಈವರೆಗೆ ಎನ್​ಎಚ್​ನಲ್ಲಿ 11799 ಅಪಘಾತ ಸಂಭವಿಸಿದ್ದರೆ, ರಾಜ್ಯ ಹೆದ್ದಾರಿಗಳಲ್ಲಿ 8446 ಹಾಗೂ ಇತರ ರಸ್ತೆಗಳಲ್ಲಿ 13778 ಅತೀ ಹೆಚ್ಚು ಅಪಘಾತ ಸಂಭವಿಸಿ, ಈ ರಸ್ತೆಗಳು ಅಪಘಾತ ವಲಯವಾಗಿ ಮಾರ್ಪಟ್ಟಿವೆ.

ಬೆಳಗ್ಗೆಯೇ ಹೆಚ್ಚು: ಒಟ್ಟಾರೆ ಅಪಘಾತಗಳ ಅವಲೋಕನ ಮಾಡಿದಾಗ ರಾಜ್ಯದಲ್ಲಿ ಸಂಭವಿಸುವ ಅಪಘಾತಗಳಲ್ಲಿ ಶೇ. 65ರಷ್ಟು ಬೆಳಗಿನ 3ರಿಂದ 5ಗಂಟೆಯೊಳಗೆ ಸಂಭವಿಸುತ್ತಿವೆ. ಆ ವೇಳೆ ಚಾಲಕರ ನಿದ್ದೆಯ ಮಂಪರು ಅಥವಾ ಸತತ ಚಾಲನೆಯಿಂದಾಗಿ ಚಾಲಕರು ಬಳಲಿರುತ್ತಾರೆ ಎಂಬ ಅಂಶ ಕಂಡುಬರುತ್ತಿದೆ.

 ಕಟ್ಟುನಿಟ್ಟಾಗಲಿ ಸಂಚಾರ ನಿಯಮ: ಎರಡನೇ ಹಂತದ ಮಹಾನಗರಗಳಲ್ಲಿ ಸಂಚಾರ ನಿಯಮ ಪಾಲಿಸುವುದು ತೀರಾ ಕಡಿಮೆ. ಟ್ರಾಫಿಕ್​ನಲ್ಲಿ ರೆಡ್ ಸಿಗ್ನಲ್ ಇದ್ದರೂ ಕೆಲ ಸವಾರರು ಸಿಗ್ನಲ್ ಜಂಪ್ ಮಾಡಿ ಸಾಗುತ್ತಾರೆ. ಜತೆಗೆ ದ್ವಿ ಚಕ್ರ ವಾಹನ ಸವಾರರು ಅರ್ಧ ಟೋಪಿ ಮಾದರಿಯ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುತ್ತಾರೆ. ಈ ವೇಳೆ ಅಪಘಾತ ಸಂಭವಿಸಿದರೆ, ಚಾಲಕರ ಪ್ರಾಣ ಹಾನಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಸಂಚಾರ ನಿಯಮ ಕಟ್ಟುನಿಟ್ಟು ಆದಾಗ ಅಪಘಾತಗಳ ಸಂಖ್ಯೆಯೂ ಕಡಿಮೆಯಾಗುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net