ಒಕ್ಕಣೆಯಿಂದ ಹೆಚ್ಚುತ್ತಿರುವ ಅಪಘಾತ

ಸರಗೂರು ತಾಲೂಕಿನ ಬಡಗಲಪುರದಿಂದ ಹೆಡಿಯಾಲಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ರೈತರು ಒಕ್ಕಣೆ ಮಡುತ್ತಿರುವುದು.
ಸರಗೂರು ತಾಲೂಕಿನ ಬಡಗಲಪುರದಿಂದ ಹೆಡಿಯಾಲಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ರೈತರು ಒಕ್ಕಣೆ ಮಡುತ್ತಿರುವುದು.
Published on

ಎಚ್.ಡಿ.ಕೋಟೆ: ತಾಲೂಕಿನಾದ್ಯಂತ ಈಗ ಹುರುಳಿ ಹಾಗೂ ರಾಗಿ ಒಕ್ಕಣೆ ಜೋರಾಗಿದ್ದು, ರಸ್ತೆಗಳಲ್ಲಿ ಒಕ್ಕಣೆ ಮಾಡುತ್ತಿರುವುದರಿಂದ ವಾಹನ ಸವಾರರು ಇನ್ನಿಲ್ಲದ ತೊಂದರೆ ಎದುರಿಸಬೇಕಾಗಿದೆ.

ರಸ್ತೆಯಲ್ಲಿ ಒಕ್ಕಣೆ ಮಾಡುತ್ತಿರುವುದರಿಂದ ರೈತರಿಗೆ ಸುಗ್ಗಿಯ ಸಂಭ್ರಮ ಮನೆ ಮಾಡಿದರೆ, ವಾಹನ ಸವಾರರಿಗೆ ಪೀಕಲಾಟ ಶುರುವಾಗಿದೆ. ನವೆಂಬರ್ ಅಂತ್ಯದಲೇ ಕಟಾವು ಮಾಡಿದ ರಾಗಿ, ಜೋಳ, ಕಾಳು, ಭತ್ತ ಹಾಗೂ ಇತರ ಬೆಳೆಗಳನ್ನು ಒಣಗಿಸಲು ರಸ್ತೆಯನ್ನು ಒಕ್ಕಣೆ ಕೇಂದ್ರವನ್ನಾಗಿ ಮಾಡಿಕೊಂಡಿರುವುದರಿಂದ ವಾಹನ ಸವಾರರು ಪರದಾಡುವಂತಾಗಿದೆ. ರಸ್ತೆಮಧ್ಯೆದಲ್ಲಿಯೇ ಒಕ್ಕಣೆ ಮಾಡುವುದರಿಂದ ವಾಹನ ಚಕ್ರಕ್ಕೆ ಕಾಳು-ಕಡ್ಡಿಗಳ ಹುಲ್ಲು ಸುತ್ತಿಕೊಂಡು ಅಪಘಾತಗಳಿಗೆ ಕಾರಣವಾಗಿದೆ. ರಸ್ತೆಯ ಕಾವಿನಿಂದ ಚಕ್ರಕ್ಕೆ ಬೆಂಕಿ ತಗುಲಿ ವಾಹನಗಳು ಸುಟ್ಟು ಹೋಗಿರುವ ಉದಾಹರಣೆ ಇವೆ.

ಒಕ್ಕಣೆ ಮಾಡಲು ಕೇಂದ್ರಗಳನ್ನು ತೆರೆದು ರೈತರಿಗೆ ಅನುಕೂಲ ಮಾಡಿಕೊಡುವುದರ ಜತೆಗೆ ವಾಹನಗಳಿಗೆ ಎದುರಾಗಬಹುದಾದ ಅನಾಹುತ ತಪ್ಪಿಸುವಂತೆ ಈ ಹಿಂದೆಯೇ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗೆ ಮನವಿ ನೀಡಲಾಗಿದೆಯಾದರೂ ಪ್ರಯೋಜನವಾಗಿಲ್ಲ. ಪರಿಣಾಮ ರೈತರು ವಿಧಿಯಿಲ್ಲದೆ ರಸ್ತೆಯನ್ನೇ ಆಶ್ರಯಿಸಬೇಕಾಗಿದೆ. ಇದರಿಂದ ವಾಹನ ಸವಾರರು ತೊಂದರೆ ಪಡುವುದು ತಪ್ಪಿಲ್ಲ.

ಕೆಲ ವರ್ಷಗಳ ಹಿಂದೆ ಒಕ್ಕಣೆಗಾಗಿ ಹೊಲದಲ್ಲಿಯೇ ಕಣ ನಿರ್ಮಾಣ ಮಾಡಲಾಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ರೈತರು ಕಣ ನಿರ್ಮಾಣ ಮಾಡುವುದನ್ನು ಬಿಟ್ಟು ರಸ್ತೆಗೆ ಇಳಿದಿದ್ದಾರೆ. ಕೆಲವು ಕಡೆಗಳಲ್ಲಿ ರೈತರು ಯಂತ್ರಗಳ ಮೊರೆ ಹೋಗಿದ್ದರೆ, ಇನ್ನೂ ಕೆಲವು ಕಡೆಗಳಲ್ಲಿ ಟಾರ್ಪಾಲ್‌ನಲ್ಲಿ ಒಕ್ಕಣೆ ಮಾಡುತ್ತಾರೆ. ಕೆಲವರು ರಾಗಿಯನ್ನು ರಸ್ತೆಗೆ ಚೆಲ್ಲಿ ಕುಳಿತುಕೊಳ್ಳುತ್ತಾರೆ. ಇದರಿಂದ ವಾಹನಗಳ ಸುಗಮ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ.

ತಾಲೂಕಿನ ಬಡಗಲಪುರ ಗ್ರಾಮದ ಬಳಿ ಒಕ್ಕಣೆ ಮಾಡುವ ರೈತರು ವಾಹನ ಚಾಲಕರೊಂದಿಗೆ ಜಗಳವಾಡಿರುವುದೂ ಉಂಟು. ಸವಾರರು ಹಾಗೂ ರೈತರ ನಡುವೆ ಗಲಾಟೆ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಉದಾಹರಣೆ ಇದೆ. ರೈತರು ಹಾಗೂ ವಾಹನ ಸವಾರರ ನಡುವೆ ಜಗಳವಾಗುವ ಘಟನೆ ತಪ್ಪಬೇಕಾದರೆ ಸಂಬಂಧಪಟ್ಟ ಅಧಿಕಾರಿಗಳು ರಸ್ತೆಯಲ್ಲಿ ಒಕ್ಕಣೆ ಮಾಡುವವರಿಗೆ ಕಟ್ಟುನಿಟ್ಟಿನ ಸೂಚನೆ ನೀಡುವ ಮೂಲಕ ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು ಎಂಬುದು ಸ್ಥಳೀಯರ ಒತ್ತಾಯ.

ಇನ್ನು ರಸ್ತೆಯಲ್ಲಿ ಒಕ್ಕಣೆ ಮಾಡುವವರು ಎತ್ತರವಾಗಿ ರಾಗಿ ಮತ್ತು ಹುರುಳಿ ಗಿಡಗಳನ್ನು ಹಾಕುವುದರಿಂದ ನಾಲ್ಕು ಚಕ್ರ ವಾಹನಗಳು ಸುಲಭವಾಗಿ ಮುಂದೆ ಸಾಗಲು ಸಾಧ್ಯವಾಗುತ್ತಿಲ್ಲ. ದ್ವಿಚಕ್ರ ವಾಹನ ಸವಾರರ ಗೋಳಂತೂ ಹೇಳುವುದು ಬೇಡ. ಧೈರ್ಯವಾಗಿ ಮುನ್ನುಗ್ಗಿದರೆ ಒಕ್ಕಣೆಯಿಂದ ಏಳುವ ಧೂಳು ಕಣ್ಣಿಗೆ ಬೀಳುತ್ತದೆ. ಇದರಿಂದಾಗಿ ಕೆಲವರ ಕಣ್ಣಿಗೆ ಅಪಾಯವಾಗಿರುವುದೂ ಉಂಟು. ಒಕ್ಕಣೆಯ ಡಾಂಬರು ರಸ್ತೆ ಬಿಟ್ಟು ಮಣ್ಣಿನ ರಸ್ತೆಗೆ ಇಳಿದರೆ ತಗ್ಗು-ದಿನ್ನೆ ಇದ್ದು, ಬೀಳುವ ಅಪಾಯ ಎದುರಿಸಬೇಕಾಗುತ್ತದೆ.

ತಾಲೂಕಿನ ಬಡಗಲಪುರ, ಹಾದನೂರು, ಯಶವಂತಪುರ, ಎತ್ತಿಗೆ, ಮುತ್ತಿಗೆಹುಂಡಿ ವ್ಯಾಪ್ತಿಯಲ್ಲಿ ಒಕ್ಕಣೆ ಕಾರ್ಯ ಜೋರಾಗಿದ್ದು, ಕಿ.ಮೀ.ಗಟ್ಟಲೇ ಒಕ್ಕಣೆಯನ್ನು ಸಾಲುಸಾಲಾಗಿ ಮಾಡಲಾಗುತ್ತದೆ. ಯಾವುದೇ ರಸ್ತೆಯಲ್ಲಿ ವಾಹನಗಳು ಸುಲಭವಾಗಿ ಹೋಗಲು ಸಾಧ್ಯವಾಗುತ್ತಿಲ್ಲ. ಕಣ ನಿರ್ಮಾಣಕ್ಕೆಂದೇ ಗ್ರಾಮೀಣಾಭಿವೃದ್ಧಿ ಸಚಿವರು ಸಹಾಯಧನದ ನೆರವು ಘೋಷಿಸಿದರಾದರೂ ಅದರ ಬಳಕೆ ಸರಿಯಾಗಿ ಆಗುತ್ತಿಲ್ಲ. ಕೆಲವು ಊರುಗಳಲ್ಲಿ ನಿರ್ಮಿಸಿರುವ ಕಣಗಳ ಬಳಕೆಯೂ ಸರಿಯಾಗಿ ಆಗುತ್ತಿಲ್ಲ.

ನಮ್ಮೂರಿನಿಂದ ಪಕ್ಕದ ಊರಿಗೆ ನಾವು ಸಾಮಾನ್ಯವಾಗಿ ದ್ವಿಚಕ್ರ ವಾಹನದಲ್ಲಿಯೇ ಹೋಗುತ್ತೇವೆ. ಒಕ್ಕಣೆಯಿಂದಾಗಿ ರಸ್ತೆಗಳಲ್ಲಿ ದ್ವಿಚಕ್ರ, ನಾಲ್ಕು ಚಕ್ರ ವಾಹನ ಚಾಲನೆ ಮಾಡುವುದೇ ಸಾಹಸದ ಕೆಲಸ. ಇದನ್ನು ಕೇಳಲು ಹೋದರೆ ನಮ್ಮ ಮೇಲೆ ಗಲಾಟೆ ಮಾಡುತ್ತಾರೆ. ರಸ್ತೆಯಲ್ಲಿ ಒಕ್ಕಣೆ ಮಾಡುವುದನ್ನು ಪೊಲೀಸ್ ಅಧಿಕಾರಿಗಳು ತಡೆಗಟ್ಟಬೇಕು. ಸರ್ಕಾರ ಒಕ್ಕಣೆ ಮಾಡಲು ಸರಿಯಾದ ವ್ಯವಸ್ಥೆ ಮಾಡಿಕೊಡಬೇಕು. ಆ ಮೂಲ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.

ನಾಗರಾಜು ವಾಹನ ಚಾಲಕ, ಹಾದನೂರು

ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಪ್ರತಿ ಗ್ರಾಮದಲ್ಲಿ ಒಕ್ಕಣೆ ಕಣ ಮಾಡಬೇಕು. ಈಗಾಗಲೇ ಇರುವ ಕಣಗಳನ್ನು ರೈತರು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಇದರಿಂದ ಬೈಕ್ ಮತ್ತು ಕಾರು ಓಡಿಸುವವರಿಗೆ ಕಿರಿಕಿರಿ ಉಂಟಾಗುತ್ತಿದೆ. ಸಂಬಂಧಪಟ್ಟವರು ಈ ಬಗ್ಗೆ ಕ್ರಮವಹಿಸಿ ಅನುಕೂಲ ಮಾಡಿಕೊಡಬೇಕು.

ಕೂಡಗಿ ಗೋವಿಂದರಾಜು ತಾಲೂಕು ಸಂಚಾಲಕ, ದಸಂಸ (ಅಂಬೇಡ್ಕರ್ ವಾದ) ಸರಗೂರು

ನಾವು ಬೀಟ್ ಹೋಗುವ ಸಮಯದಲ್ಲಿ ನಾಲ್ಕು ಕಡೆ ರೈತರು ರಾಗಿ ಮತ್ತು ಹುರುಳಿ ಹುಲ್ಲನ್ನು ರಸ್ತೆಗೆ ಹಾಕಿಕೊಂಡಿದ್ದರು. ಅವರಿಗೆ ತಿಳಿ ಹೇಳಿದ್ದೇವೆ. ತಾಲೂಕು, ಗ್ರಾಮ ಪಂಚಾಯಿತಿ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಪ್ರತಿ ಗ್ರಾಮದಲ್ಲಿ ಕಣ ಮಾಡಿದರೆ ರೈತರು ರಸ್ತೆಯಲ್ಲಿ ಒಕ್ಕಣೆ ಮಾಡಲು ಬರುವುದಿಲ್ಲ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಇತ್ತ ಗಮನಹರಿಸಿ ಅಗತ್ಯ ಕ್ರಮ ವಹಿಸಬೇಕು. ಅಲ್ಲದೆ ರಸ್ತೆ ಮೇಲೆ ಒಕ್ಕಣೆ ಮಾಡದಂತೆ ರೈತರಿಗೆ ಸೂಚಿಸಿದ್ದೇವೆ.

ನಂದೀಶ್ ಕುಮಾರ್ ಪಿಎಸ್‌ಐ, ಸರಗೂರು ಪೋಲಿಸ್ ಠಾಣೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net