ತಗ್ಗಿದ ಅಪಘಾತಗಳ ಸಂಖ್ಯೆ, ಕಾಯ್ದೆ ಜಾರಿ, ಲಾಕ್‌ಡೌನ್ ಕಾರಣ

accident
Published on

ಭರತ್ ಶೆಟ್ಟಿಗಾರ್, ಮಂಗಳೂರು

ಮೋಟಾರು ವಾಹನ(ತಿದ್ದುಪಡಿ) ಕಾಯ್ದೆ -2019 ದೇಶದಲ್ಲಿ ಜಾರಿಗೊಂಡ ಬಳಿಕ ವಾಹನ ಅಪಘಾತ ಹಾಗೂ ಸಾವನ್ನಪ್ಪಿದವರ ಸಂಖ್ಯೆ ಕೊಂಚ ಇಳಿಕೆಯಾಗಿದೆ. ಆದರೆ, ಅಪಘಾತಗಳ ತೀವ್ರತೆ ಹೆಚ್ಚಾಗಿರುವುದು ಆತಂಕಕಾರಿ ಅಂಶ.

ಕಾಯ್ದೆ ಜಾರಿಗಿಂತಲೂ ಅಪಘಾತದ ಪ್ರಮಾಣ ಇಳಿಕೆ ಆಗಲು ಕರೊನಾ ಲಾಕ್‌ಡೌನ್ ಕಾರಣ ಇರಬಹುದು ಎಂದೂ ವಿಶ್ಲೇಷಿಸಲಾಗಿದೆ. ಬೆಂಗಳೂರಿನ ಸಿಯುಟಿಎಸ್ ಇಂಟರ್‌ನ್ಯಾಷನಲ್ ಸಂಸ್ಥೆ ನಿರ್ದೇಶಕ ಜಾರ್ಜ್ ಚೆರಿಯಾನ್ ಅವರ ಪ್ರಕಾರ, ಖಾಲಿ ರಸ್ತೆಯಲ್ಲಿ ವಾಹನಗಳು ಮಿತಿಮೀರಿದ ವೇಗದಲ್ಲಿ ಸಂಚರಿಸುವುದರಿಂದ ಅಪಘಾತಗಳ ತೀವ್ರತೆ ಹೆಚ್ಚಾಗಿದೆ. ಕಾಯ್ದೆಯ ಭಯದಿಂದ ಅಲ್ಲ. ಇಂದಿಗೂ ಶೇ.50ಕ್ಕೂ ಅಧಿಕ ಮಂದಿಗೆ ಕಾಯ್ದೆಯಲ್ಲಿ ಏನಿದೆ ಎಂಬ ಮಾಹಿತಿ ತಿಳಿದಿಲ್ಲ.

ಅಧ್ಯಯನ ವರದಿಯೊಂದರ ಪ್ರಕಾರ, ವಿಶ್ವದಲ್ಲಿ ಸಂಭವಿಸುವ ರಸ್ತೆ ಅಪಘಾತಗಳ ಪೈಕಿ ಶೇ.11ರಷ್ಟು ಸಾವು ಭಾರತದಲ್ಲಿ ಸಂಭವಿಸುತ್ತದೆ. 2019ರಲ್ಲಿ ಭಾರತದಲ್ಲಿ 4.37 ಲಕ್ಷ ಅಪಘಾತಗಳು ಸಂಭವಿಸಿ, 1.54 ಲಕ್ಷ ಮಂದಿ ಮೃತಪಟ್ಟಿದ್ದಾರೆ. ಗಾಯಾಳುಗಳ ಸಂಖ್ಯೆ 4.39 ಲಕ್ಷ. ಶೇ.70ರಷ್ಟು ಅಪಘಾತಗಳಿಗೆ ಅತಿಯಾದ ವೇಗದ ಚಾಲನೆಯೇ ಕಾರಣ. ಮೃತರಲ್ಲಿ ಶೇ.47.8ರಷ್ಟು ಮಂದಿ 18-35 ವರ್ಷದ ಯುವಕರು! ಲಂಗುಲಗಾಮಿಲ್ಲದ ಯುವಕರ ಚಾಲನೆ ಜೀವಕ್ಕೆ ಕುತ್ತು ತರುತ್ತಿದೆ ಎಂಬುದು ಆತಂಕಕಾರಿ ಸಂಗತಿ. 2019ಕ್ಕೆ ಹೋಲಿಕೆ ಮಾಡಿದರೆ 2020ರಲ್ಲಿ ಪಘಾತಗಳ ಸಂಖ್ಯೆ ಶೇ.18ರಷ್ಟು ಕಡಿಮೆಯಾಗಿದೆ. 3.54 ಲಕ್ಷ ರಸ್ತೆ ಅಪಘಾತಗಳಲ್ಲಿ ಮಡಿದವರ ಸಂಖ್ಯೆ 1.33 ಲಕ್ಷ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ರಾಜ್ಯದಲ್ಲಿ 2018ರಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ 10,990 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 2019ರಲ್ಲಿ 10,958 ಮಂದಿ, 2020ರಲ್ಲಿ 9,760 ಮಂದಿ ಸಾವನ್ನಪ್ಪಿದ್ದಾರೆ. 2021ರಲ್ಲಿ ಅಕ್ಟೋಬರ್‌ವರೆಗೆ ಮಡಿದವರ ಸಂಖ್ಯೆ 7 ಸಾವಿರ. ಇದರಲ್ಲಿ ಶೇ.13ರಷ್ಟು ಮಂದಿ ಪಾದಚಾರಿಗಳು ಎಂಬುದು ಆಘಾತಕಾರಿ ಅಂಶ.

ಮಂಗಳೂರಿನಲ್ಲಿ 692 ಅಪಘಾತ: ಪೊಲೀಸ್ ಇಲಾಖೆ ಮಾಹಿತಿ ಪ್ರಕಾರ, ಮಂಗಳೂರಿನಲ್ಲಿ 2021ರಲ್ಲಿ 692 ವಾಹನ ಅಪಘಾತಗಳು ಸಂಭವಿಸಿ, 116 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇತರ ದಿನಗಳಿಗೆ ಹೋಲಿಸಿದರೆ ಭಾನುವಾರ ಹೆಚ್ಚು ಅಪಘಾತ ಸಂಭವಿಸುತ್ತದೆ! ಅದರಲ್ಲೂ 3-6 ಗಂಟೆಯ ಅವಧಿಯಲ್ಲಿ ಶೇ.21ರಷ್ಟು ಮತ್ತು 6ರಿಂದ 9 ಗಂಟೆ ಅವಧಿಯಲ್ಲಿ ಶೇ.20ರಷ್ಟು ಅಪಘಾತಗಳು ಘಟಿಸಿವೆ. ಮದ್ಯಪಾನ ಮಾಡಿ ವಾಹನ ಚಾಲನೆ, ನಿರ್ಲಕ್ಷೃ ಮತ್ತು ಅತಿಯಾದ ವೇಗದ ಚಾಲನೆ ಇದಕ್ಕೆ ಕಾರಣ. ಮಂಗಳೂರಿನ ಲಾಲ್‌ಭಾಗ್-ಉರ್ವಸ್ಟೋರ್‌ನಂತಹ ಜಾಗಗಳಲ್ಲಿ ಶೇ.41ರಷ್ಟು ಅಪಘಾತಗಳು ಘಟಿಸಿವೆ.

ವಾಹನ ತಿದ್ದುಪಡಿ ಕಾಯ್ದೆಯಲ್ಲಿ ಏನಿದೆ?: ತಿದ್ದುಪಡಿ ಕಾಯ್ದೆಯಲ್ಲಿ ರಸ್ತೆ ಅಪಘಾತಗಳನ್ನು ಕಡಿಮೆ ಮಾಡುವ ದೃಷ್ಟಿಯಿಂದ ಕಟ್ಟುನಿಟ್ಟಿನ ನಿಬಂಧನೆಗಳಿವೆ. ಅನಧಿಕೃತ ಚಾಲನೆ,ನಿಗದಿತ ಮಿತಿಗಿಂತ ಹೆಚ್ಚಿನ ವೇಗದಲ್ಲಿ ವಾಹನ ಸಂಚಾರ, ಮಿತಿಗಿಂತ ಹೆಚ್ಚು ಪ್ರಯಾಣಿಕರು, ಅಪ್ರಾಪ್ತ ವಯಸ್ಕರಿಂದ ಚಾಲನೆ ಮೊದಲಾದ ಸಂಚಾರ ನಿಯಮ ಉಲ್ಲಂಘನೆಗೆ ಕಠಿಣ ಶಿಕ್ಷೆ ಹಾಗೂ ಭಾರಿ ಪ್ರಮಾಣದ ದಂಡ ತೆರಬೇಕಾಗುತ್ತದೆ. ಸಾವಿರ ರೂ.ನಿಂದ 1ಲಕ್ಷ ರೂ.ವರೆಗೆ ದಂಡ ವಿಧಿಸಲು ಅವಕಾಶವಿದೆ. ಅಪ್ರಾಪ್ತರು ವಾಹನ ಚಾಲನೆ ಮಾಡಿ ಸಿಕ್ಕಿಬಿದ್ದರೆ ಪಾಲಕರಿಗೆ 25 ಸಾವಿರ ರೂ.ದಂಡ ಮತ್ತು ಕಾನೂನು ಕ್ರಮ. ನಾಲ್ಕು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಕಾರಿನಲ್ಲಿ ಸೀಟ್‌ಬೆಲ್ಟ್, ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಕಡ್ಡಾಯ. ಸಿಗ್ನಲ್ ಜಂಪ್, ಚಾಲನೆ ವೇಳೆ ಮೊಬೈಲ್ ಬಳಕೆಗೆ 5 ಸಾವಿರ ರೂ.ದಂಡ, 6 ತಿಂಗಳು ಜೈಲು.

ಕಾಯ್ದೆ ಜಾರಿಗೊಂಡು 2 ವರ್ಷಗಳಾಗಿವೆ. ಆದರೂ, ಜನರಿಗೆ ಕಾಯ್ದೆಯಲ್ಲಿ ಏನಿದೆ ಎಂಬ ಮಾಹಿತಿ ಇಲ್ಲ. ಆರಂಭದ ಕೆಲವು ದಿನ ದಂಡದ ಪ್ರಮಾಣ ಹೆಚ್ಚಳವನ್ನು ವಿರೋಧಿಸಿ, ಬಳಿಕ ಜನರು ಮರೆತು ಬಿಟ್ಟಿದ್ದಾರೆ. ಅಪಘಾತಗಳಿಗೆ ಸಂಬಂಧಿಸಿ ಕೋರ್ಟ್‌ನಲ್ಲಿ ಪ್ರಕರಣಗಳಿರುವ ತನಕವಷ್ಟೇ ಕಾಯ್ದೆಯ ಬಿಸಿ ಮುಟ್ಟುತ್ತಿದೆ. ಕಾಯ್ದೆ ಬಗ್ಗೆ ಜಾಗೃತಿ ಅಗತ್ಯ. ಜಾರ್ಜ್ ಚೆರಿಯಾನ್ ನಿರ್ದೇಶಕ, ಸಿಯುಟಿಎಸ್ ಇಂಟರ್‌ನ್ಯಾಷನಲ್ ಮಂಗಳೂರು ಕನಿಷನರೆಟ್ ವ್ಯಾಪ್ತಿಯಲ್ಲಿ ಅಭಿಯಾನ ಮಾಡಿ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗಿದೆ. ಉಲ್ಲಂಘನೆಗೆ ದಂಡವನ್ನೂ ವಿಧಿಸಲಾಗಿದೆ. ಇದು ನಿರಂತರ ಪ್ರಕ್ರಿಯೆ. ಸಾರ್ವಜನಿಕರಲ್ಲಿ, ಮುಖ್ಯವಾಗಿ ಯುವಜನರಲ್ಲಿ ಸಂಚಾರ ಸುರಕ್ಷತೆ ಜಾಗೃತಿ ಮೂಡಿಸುವ ಉದ್ದೇಶದಿಂದ ಕಾಲೇಜು, ಶಿಕ್ಷಣ ಸಂಸ್ಥೆಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗುತ್ತಿದೆ. ಎನ್. ಶಶಿಕುಮಾರ್ ಸಿಟಿ ಪೊಲೀಸ್ ಕಮಿಷನರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net