

ರಾಯಚೂರು: ಪ್ರತಿಯೊಬ್ಬರು ರಸ್ತೆ ಸುರಕ್ಷತಾ ನಿಯಮಗಳನ್ನು ಅರಿತುಕೊಂಡು ಪಾಲಿಸಿದಾಗ ಮಾತ್ರ ಅಪಘಾತಗಳನ್ನು ತಪ್ಪಿಸಲು ಸಾಧ್ಯವಾಗುತ್ತಿದ್ದು, ಪ್ರಮುಖವಾಗಿ ಮಕ್ಕಳು ರಸ್ತೆ ಸುರಕ್ಷತಾ ನಿಯಮಗಳನ್ನು ಅರಿತುಕೊಳ್ಳಬೇಕಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಬಿ.ನಿಖಿಲ್ ಹೇಳಿದರು.
ಸ್ಥಳೀಯ ಜಿಲ್ಲಾಕಾರಿ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ರಸ್ತೆ ಸುರಕ್ಷತಾ ಮಾಸಾಚರಣೆ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.
ಜನರು ನಿಯಮಗಳನ್ನು ಪಾಲಿಸುವುದರ ಜತೆಗೆ ಇತರರಿಗೆ ನಿಯಮ ಪಾಲನೆ ಮಾಡುವಂತೆ ತಿಳಿಸಬೇಕು. ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಅಪಘಾತಗಳಲ್ಲಿ ಮರಣ ಪ್ರಮಾಣ ಕಡಿಮೆಯಾಗಿದ್ದು, ರಾಯಚೂರು ಜಿಲ್ಲೆಯಲ್ಲಿ ಶೇ.20ಷ್ಟು ಅಪಘಾತ ಮರಣಗಳು ಕಡಿಮೆಯಾಗಿದೆ ಎಂದು ತಿಳಿಸಿದರು.
ಪ್ರಾದೇಶಿಕ ಸಾರಿಗೆ ಅಕಾರಿ ಜಿ.ಟಿ.ವಿನಯಾ ಮಾತನಾಡಿ, ಸಾರ್ವಜನಿಕರು ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಜತೆಗೆ ಅಪಘಾತ ತಡೆಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ರಸ್ತೆ ಸುರಕ್ಷತಾ ಮಾಸಾಚರಣೆ ಅಂಗವಾಗಿ ಜನರಿಗೆ ನಿಯಮಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಕಾರಿ ಚಂದ್ರಶೇಖರ ನಾಯಕ, ಹೆಚ್ಚುವರಿ ಪೊಲೀಸ್ ವರಿಷ್ಠಾಕಾರಿ ಡಾ.ಆರ್.ಶಿವಕುಮಾರ, ಪಿಯು ಡಿಡಿಪಿಐ ಸೋಮಶೇಖರಪ್ಪ ಹೊಕ್ರಾಣಿ, ಸಾರಿಗೆ ಇಲಾಖೆ ಅಕಾರಿಗಳಾದ ನಾಗವಂದ, ಅರ್ಜುನ, ಸಾಜೀದ್ ಹುಸೇನ್, ಸುಧಾ ಪರಿಮಳ, ನಟರಾಜ, ಅರ್ಜುನ ಚೌಹಾಣ, ನಟರಾಜ ಉಪಸ್ಥಿತರಿದ್ದರು.