

ಮಂಗಳೂರು: ನಗರದ ಬಾರೆಬೈಲ್‌ನಲ್ಲಿರುವ ಅಗ್ನಿಶಾಮಕ ಠಾಣೆ ವಾಹನ ನಿಲುಗಡೆ ಕಟ್ಟಡಕ್ಕೆ ಮೇಲ್ಛಾವಣಿಗೆ ಶೀಟ್ ಅಳವಡಿಸುವ ವೇಳೆ ಮಂಗಳವಾರ ಆಯತಪ್ಪಿ ಸುಮಾರು 30 ಅಡಿ ಎತ್ತರದಿಂದ ಬಿದ್ದು ಬಂಟ್ವಾಳ ಅಮ್ಮುಂಜೆಯ ದೀಪಕ್ (29) ಮೃತಪಟ್ಟಿದ್ದಾರೆ.
ಗುತ್ತಿಗೆದಾರ ಪ್ರವೀಣ್ ಎಂಬವರ ಜತೆ ದೀಪಕ್ ಕಳೆದ 8 ವರ್ಷದಿಂದ ಪ್ಯಾಬ್ರಿಕೇಶನ್ ಕೆಲಸ ಮಾಡುತ್ತಿದ್ದರು. ಕಳೆದ ಒಂದು ವಾರದಿಂದ ನಿರ್ಮಿತಿ ಕೇಂದ್ರದವರು ಮಾಡಿಸುತ್ತಿದ್ದ ಶೀಟು ಅಳವಡಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದರು. ಬೆಳಗ್ಗೆ 9.50ರ ವೇಳೆಗೆ 30 ಅಡಿ ಎತ್ತರದಿಂದ ಬಿದ್ದ ಪರಿಣಾಮ ತಲೆಗೆ ಗಂಭೀರ ಗಾಯವಾಗಿದ್ದು, ತಕ್ಷಣ ಅಲ್ಲಿದ್ದ ಸಿಬ್ಬಂದಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ 10.39ರ ವೇಳೆಗೆ ದೀಪಕ್ ಮೃತಪಟ್ಟಿದ್ದಾರೆ.
ಈ ಘಟನೆಗೆ ನಿರ್ಮಿತಿ ಕೇಂದ್ರದ ಇಂಜಿನಿಯರ್ ನವೀತ್, ಕೆಲಸ ಮಾಡಿಸುತ್ತಿದ್ದ ಪ್ರವೀಣ್ ಹಾಗೂ ಕೆಲಸದ ಉಸ್ತುವಾರಿ ವಹಿಸಿದ್ದ ನಿರ್ಮಿತಿ ಕೇಂದ್ರಕ್ಕೆ ಸಂಬಂಧಿಸಿದವರು ಕೆಲಸ ಮಾಡಿಸುವ ವೇಳೆ ಕೆಲಸಗಾರರ ಸುರಕ್ಷತಾ ದೃಷ್ಟಿಯಿಂದ ಸೇಪ್ಟಿ ನೆಟ್ ಅಳವಡಿಸದೇ ಹಾಗೂ ಸೇಪ್ಟಿ ಬೆಲ್ಟ್, ಸೇಪ್ಟಿ ಹೆಲ್ಮೆಟ್ ನೀಡದೆ ತೀವ್ರ ನಿರ್ಲಕ್ಷ ವಹಿಸಿರುವುದೇ ಈ ಅನಾಹುತಕ್ಕೆ ಕಾರಣವಾಗಿರುತ್ತದೆ ಎಂದು ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.