ಅಪಘಾತಕ್ಕೀಡಾದ ದಾಳಿಂಬೆ ಗಾಡಿ - ಹಣ್ಣಿಗೆ ಮುಕ್ಕರಿಸಿದ ಜನ

8 YLP ACCIDENT
Published on

ಯಲ್ಲಾಪುರ: ಲಾರಿ ಹಾಗೂ ಬೊಲೆರೊ ವಾಹನ ಅಪಘಾತಕ್ಕೀಡಾಗಿ ಲಾರಿ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ತಾಲೂಕಿನ ಗೇರಗದ್ದೆ ಕ್ರಾಸ್ ಬಳಿ ಸೋಮವಾರ ಸಂಜೆ ಸಂಭವಿಸಿದೆ.

ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ದಾಳಿಂಬೆ ಹಣ್ಣು ಸಾಗಿಸುತ್ತಿದ್ದ ಬೊಲೆರೊಗೆ ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಲಾರಿ ರಸ್ತೆ ಪಕ್ಕದ ಕಂದಕಕ್ಕೆ ಉರುಳಿದೆ. ಬೊಲೆರೊ ಹಿಂಭಾಗ ನಜ್ಜುಗುಜ್ಜಾಗಿದ್ದು, ದಾಳಿಂಬೆ ಹಣ್ಣುಗಳೆಲ್ಲ ಚೆಲ್ಲಾಪಿಲ್ಲಿಯಾಗಿದ್ದವು. ಗಾಯಗೊಂಡ ಲಾರಿ ಚಾಲಕನನ್ನು ಯಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯಿಂದ ಕೆಲಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು. ಪೊಲೀಸರು ಸ್ಥಳಕ್ಕೆ ಆಗಮಿಸಿ, ಸಂಚಾರ ವ್ಯವಸ್ಥೆ ಸುಗಮಗೊಳಿಸಿದರು.

ಹಣ್ಣು ತುಂಬಿಕೊಂಡ ಜನ

ರಸ್ತೆಯಲ್ಲಿ ಹರಡಿದ್ದ ದಾಳಿಂಬೆ ಹಣ್ಣುಗಳನ್ನು ತೆಗೆದುಕೊಂಡು ಹೋಗಲು ಜನ ಮುಗಿ ಬಿದ್ದರು. ರಸ್ತೆಯಲ್ಲಿ ವಾಹನಗಳು ಸಂಚರಿಸುವುದನ್ನೂ ಲೆಕ್ಕಿಸದೇ ಚೀಲಗಳಲ್ಲಿ ಹಣ್ಣುಗಳನ್ನು ತುಂಬಿಕೊಂಡರು. ಕೆಲವರು ಹಣ್ಣುಗಳನ್ನು ತುಂಬಿದ್ದ ಟ್ರೇ ಸಮೇತ ಎತ್ತಿಕೊಂಡು ಹೋದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net