

ಶಿವರಾಜ.ಎಂ ಬೆಂಗಳೂರು ಗ್ರಾಮಾಂತರ
ಜಿಲ್ಲೆಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುಮಾರು 38 ಅಪಾಯಕಾರಿ ಸ್ಥಳ( ಬ್ಲಾಕ್‌ಸ್ಟಾಟ್)ಗಳನ್ನು ಗುರುತಿಸಿರುವ ಜಿಲ್ಲಾ ಪೊಲೀಸರು ಅಪಘಾತ ಪ್ರಕರಣ ತಡೆಗೆ ಕೆಲವೊಂದು ಮಾರ್ಗಸೂಚಿ ಸಿದ್ದಪಡಿಸಲು ಚಿಂತನೆ ನಡೆಸಿದ್ದಾರೆ.
ಶೀಘ್ರದಲ್ಲೇ ಹೆದ್ದಾರಿ ಪ್ರಾಧಿಕಾರ ಹಾಗೂ ಜಿಲ್ಲಾಡಳಿತದ ವಿವಿಧ ಇಲಾಖೆಯೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಅಪಘಾತ ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾರ್ಗಸೂಚಿ ಸಿದ್ದಪಡಿಸಲಾಗುವುದು ಎಂದು ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.ಪ್ರಸಕ್ತ ಸಾಲಿನಲ್ಲಿ ಸಂಭವಿಸಿದ ವಿವಿಧ ರಸ್ತೆ ಅಪಘಾತ ಪ್ರಕರಣಗಳಲ್ಲಿ ಸುಮಾರು 297 ಮಂದಿ ಮೃತಪಟ್ಟಿರುವುದು ಪೊಲೀಸ್ ಅಂಕಿಅಂಶದಿಂದ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಅಪಘಾತ ಪ್ರಕರಣ ತಡೆಗಟ್ಟಿ ಪ್ರಯಾಣಿಕರ ಪ್ರಾಣರಕ್ಷಣೆಗೆ ಇಂಥ ಸ್ಥಳಗಳಲ್ಲಿ ಕೆಲವೊಂದು ಮಾರ್ಪಾಡು ಮಾಡುವ ಬಗ್ಗೆ ಜಿಲ್ಲಾಧಿಕಾರಿಯೊಂದಿಗೆ ಪೊಲೀಸ್ ವರಿಷ್ಟಾಧಿಕಾರಿ ಚರ್ಚೆ ನಡೆಸಿದ್ದಾರೆ. ಹೆದ್ದಾರಿಗಳ ಪೈಕಿ 35 ರಾಷ್ಟ್ರೀಯ ಹೆದ್ದಾರಿ ಅಪಾಯಕಾರಿ ಸ್ಥಳಗಳಾದರೆ, 3 ರಾಜ್ಯ ಹೆದ್ದಾರಿಗಳು ಅಪಾಯಕಾರಿ ಎಂಬುದು ದೃಢಪಟ್ಟಿದೆ. ಈ ಭಾಗಗಳಲ್ಲಿ ಅತೀ ಹೆಚ್ಚು ಅಪಘಾತ ಸಂಭವಿಸಿದ್ದು ಅಷ್ಟೇ ಪ್ರಮಾಣದಲ್ಲಿ ಸಾವುನೋವು ಸಂಭವಿಸಿದೆ.
ಸ್ಕೈವಾಕ್ ನಿರ್ಮಾಣಕ್ಕೆ ಚಿಂತನೆ: ನೆಲಮಂಗಲ ತಾಲೂಕು ದಾಬಸ್‌ಪೇಟೆಯಿಂದ ಚೆನೈಗೆ ಸಂಪರ್ಕ ಕಲ್ಪಿಸುವ ಎಕ್ಸ್‌ಪ್ರೆಸ್ ವೇ, ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿ, ಬೆಂಗಳೂರು-ಹೊಸಕೋಟೆ ಮಾರ್ಗದ ಕೋಲಾರ ಹೆದ್ದಾರಿ, ಚಿಕ್ಕಬಳ್ಳಾಪುರಕ್ಕೆ ಸಂಪರ್ಕ ಕಲ್ಪಿಸುವ ದೇವನಹಳ್ಳಿ ಹೆದ್ದಾರಿ, ದೇವನಹಳ್ಳಿ ಸೂಲಿಬೆಲೆ ಮಾರ್ಗವಾಗಿ ಹೊಸಕೋಟೆ ಹೆದ್ದಾರಿ ಹೀಗೆ ಹಲವು ಹೆದ್ದಾರಿಗಳಲ್ಲಿ ಸಾರ್ವಜನಿಕರ ಸಂಚಾರಕ್ಕೆ ಸ್ಕೈವಾಕ್ ನಿರ್ಮಾಣ ಮಾಡಬೇಕು ಎಂಬ ಜನರ ಒತ್ತಾಯದ ಅನುಸಾರ ಜಿಲ್ಲಾಡಳಿತ ಸ್ಥಳ ಪರಿಶೀಲನೆಗೆ ತಂಡ ರಚನೆ ಮಾಡುತ್ತಿದೆ.
ಅಪಾಯಕಾರಿ ತಿರುವುಗಳು: ಹೆದ್ದಾರಿ ನಿರ್ಮಾಣದ ವೇಳೆ ಕೆಲವೊಂದು ಕಡೆಗಳಲ್ಲಿ ಅಪಾಯಕಾರಿ ತಿರುವುಗಳಿದ್ದು ವೇಗವಾಗಿ ಸಂಚರಿಸುವ ವಾಹನಗಳು ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಡುವ ಸಾಧ್ಯತೆ ಹೆಚ್ಚುತ್ತಿದೆ. ಇಂಥ ಸ್ಥಳಗಳಲ್ಲಿ ರಸ್ತೆ ತಿರುವುಗಳ ಬಗ್ಗೆ ಸೂಚನಾ ಲಕಗಳಿಲ್ಲದಿರುವುದು ಪ್ರಮುಖ ಕಾರಣವಾಗಿದೆ, ಈ ಹಿನ್ನೆಲೆಯಲ್ಲಿ ಹೆದ್ದಾರಿಯುದ್ದಕ್ಕೂ ಅಗತ್ಯವಿರುವ ಕಡೆಗೆ ಹೆಚ್ಚಿನ ಪ್ರಮಾಣದಲ್ಲಿ ಸೂಚನಾ ಲಕಗಳನ್ನು ಅಳವಡಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ.
ವೇಗ ಮಿತಿ ನಿಗಧಿ? ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ವಾಹನಗಳ ಸಂಚಾರದ ಆರಂಭದ ದಿನಗಳಲ್ಲಿ ಹೆಚ್ಚು ಅಪಘಾತ ಪ್ರಕರಣಗಳು ಸಂಭವಿಸಿದ್ದವು. ವೇಗಮಿತಿ ಇಲ್ಲದ ಕಾರಣ ಅತೀ ವೇಗದ ಚಾಲನೆಯಿಂದ ಅಪಘಾತ ಸಂಭವಿಸಿದ್ದ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಪೊಲೀಸರು ವೇಗ ಮಿತಿ ನಿಗಧಿಗೆ ಸಲಹೆ ನೀಡಿದ್ದರು. ನಂತರದ ದಿನಗಳಲ್ಲಿ ಗಣನೀಯ ಪ್ರಮಾಣದಲ್ಲಿ ಅಪಘಾತ ಪ್ರಕರಣಗಳು ತಗ್ಗಿದ್ದವು. ಇದೇ ಮಾದರಿಯಲ್ಲಿ ಜಿಲ್ಲೆಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಲ್ಲೆಲ್ಲಿ ವೇಗಮಿತಿ ನಿಗಧಿಗೊಳಿಸಬಹುದು ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.
ರಸ್ತೆ ಅಗಲೀಕರಣವಾಗಬೇಕಿದೆ: ನೆಲಮಂಗಲ ಸರ್ಕಲ್ನಲ್ಲಿ ವಾಹನ ದಟ್ಟಣೆ ಹೆಚ್ಚುತ್ತಿದೆ, ಕುಣಿಗಲ್ಗೆ ಹೋಗುವ ಕಡೆ ರಸ್ತೆ ಅಗಲೀಕರಣ ಮಾಡಿದರೆ ವಾಹನ ಸಂಚಾರ ಸುಗಮವಾಗುತ್ತದೆ ಎಂಬುದು ಜಿಲ್ಲಾಡಳಿತದ ಚಿಂತನೆಯಾಗಿದೆ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸೈನ್‌ಬೋರ್ಡ್‌ಗಳನ್ನು ಅಳವಡಿಸಬೇಕು, ಇತರೆ ರಸ್ತೆಗಳ ಆಯ್ದ ಕಡೆಗಳಲ್ಲಿ ರಸ್ತೆಉಬ್ಬು ನಿರ್ಮಿಸಬೇಕು, ಸರ್ವಿಸ್ ರಸ್ತೆಗಳಲ್ಲಿ ಅತಿಕ್ರಮಣವಾಗಿ ಹಾಕಿರುವ ಅಂಗಡಿಗಳನ್ನು ತೆರವುಗೊಳಿಸುವುದರ ಜತೆಗೆ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಡಬಾರದು ಎಂಬುದರ ಬಗ್ಗೆ ಚರ್ಚೆ ನಡೆದಿದೆ.
ಜಿಲ್ಲಾ ವ್ಯಾಫ್ತಿಯಲ್ಲಿ ಹಾದುಹೋಗಿರುವ ಹೆದ್ದಾರಿಗಳಲ್ಲಿ ದಿನೇ ದಿನೇ ರಸ್ತೆ ಅಪಘಾತ ಪ್ರಕರಣಗಳು ಹೆಚ್ಚುತ್ತಲೇ ಇವೆ, ಹೆದ್ದಾರಿಗಳಲ್ಲಿ ಅಪಘಾತಗಳನ್ನು ತಡೆಗಟ್ಟಲು ಕ್ರಮಬದ್ಧ ಯೋಜನೆ ರೂಪಿಸಿ ಕಾರ್ಯರೂಪಕ್ಕೆ ತರಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ, ಶೀಘ್ರದಲ್ಲೇ ಅಧಿಕಾರಿಗಳ ತಂಡದೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಅಗತ್ಯಕ್ರಮಕೈಗೊಳ್ಳಲಾಗುವುದು.
ಎ.ಬಿ ಬಸವರಾಜು, ಜಿಲ್ಲಾಧಿಕಾರಿ
---
ಕೆಲವು ದಿನಗಳ ಹಿಂದೆ ಜಿಲ್ಲಾಧಿಕಾರಿ ಸಭೆಯಲ್ಲಿ ಹೆದ್ದಾರಿಗಳಲ್ಲಿ ಸಂಭವಿಸುವ ಅಪಘಾತ ತಡೆಗೆ ಕ್ರಮಕೈಗೊಳ್ಳುವಂತೆ ಸೂಚನೆ ಬಂದಿದೆ. ಸಭೆಯಲ್ಲಿ ಅಪಾಯಕಾರಿ ಸ್ಥಳಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಜಿಲ್ಲಾಡಳಿತದ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಲಾಗುತ್ತಿದ್ದು ಕೆಲವೊಂದು ಅಗತ್ಯಕ್ರಮ ಕೈಗೊಳ್ಳಲು ಮುಂದಾಗಲಾಗಿದೆ.
ಸಿ.ಕೆ.ಬಾಬಾ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ