

ಹುಬ್ಬಳ್ಳಿ: ಇಲ್ಲಿಯ ಹಳೇ ಬಸ್ ನಿಲ್ದಾಣ ಬಳಿ ಅಪರಿಚಿತ ವಾಹನ ಹಾಯ್ದು ತೀವ್ರ ಗಾಯಗೊಂಡು ಒದ್ದಾಡುತ್ತಿದ್ದ ಅನಾಥ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುವ ಮೂಲಕ ಪೊಲೀಸ್ ಸಿಬ್ಬಂದಿಯು ಮಾನವೀಯತೆ, ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.
ಬುಧವಾರ ತಡರಾತ್ರಿ 11.30ರ ಸುಮಾರಿಗೆ ಶಿವಪುತ್ರಪ್ಪ (60) ಎಂಬಾತನಿಗೆ ಬೈಕ್ ಬಡಿದಿದೆ. ಅಪಘಾತದಲ್ಲಿ ವ್ಯಕ್ತಿಯ ಕಾಲು ಮುರಿದಿದೆ. ಆದರೆ, ಸವಾರ ವಾಹನ ನಿಲ್ಲಿಸದೇ ಪರಾರಿಯಾಗಿದ್ದಾನೆ.
ಈ ವೇಳೆ ಬೀಟ್ ಪೊಲೀಸ್ ಸಕ್ರಗೌಡರ ಮಾಹಿತಿ ನೀಡಿದ ಕೂಡಲೇ ಸ್ಥಳಕ್ಕೆ ಪಿಎಸ್ಐ ಚನ್ನಬಸಪ್ಪ ಚಲವಾದಿ ಅವರು ಆಗಮಿಸಿದ್ದಾರೆ.
ವ್ಯಕ್ತಿಯ ಸ್ಥಿತಿ ನೋಡಿ ಆಂಬ್ಯುಲೆನ್ಸ್ ತಕ್ಷಣಕ್ಕೆ ಸಿಗದ ಹಿನ್ನೆಲೆಯಲ್ಲಿ ಆಟೋದಲ್ಲಿ ಕಿಮ್ಸ್ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲು ನೆರವಾದರು.
ಸದ್ಯ ಗಾಯಗೊಂಡ ವ್ಯಕ್ತಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಈ ಕುರಿತು ಉತ್ತರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.