ಅಳದಂಗಡಿ ಪೇಟೆಯ ರಾಜ್ಯ ಹೆದ್ದಾರಿಯಲ್ಲಿ ಅಪಘಾತ

accident
Published on

ಬೆಳ್ತಂಗಡಿ: ಖಾಸಗಿ ಬಸ್ಸೊಂದು ರಸ್ತೆಯಲ್ಲೇ ನಿಂತಿದ್ದ ಕಾರಣದಿಂದ ಅಳದಂಗಡಿ ಪೇಟೆಯಲ್ಲಿನ ರಾಜ್ಯ ಹೆದ್ದಾರಿಯಲ್ಲಿ ಅಪಘಾತ ನಡೆದಿದ್ದು, ಅದೃಷ್ಟವಶಾತ್ ಪ್ರಾಣಾಪಾಯ ತಪ್ಪಿದೆ.

ಶನಿವಾರ ಮಧ್ಯಾಹ್ನ 12ರ ಸುವಾರಿಗೆ ಬೆಳ್ತಂಗಡಿಗೆ ಹೋಗುವ ಖಾಸಗಿ ಬಸ್ಸೊಂದು ಪ್ರಯಾಣಿಕರನ್ನು ಇಳಿಸಲು ಅಳದಂಗಡಿ ಬಸ್ ನಿಲ್ದಾಣದಲ್ಲಿ ನಿಂತಿತ್ತು. ಇದೇ ವೇಳೆ ಬೆಂಗಳೂರಿನ ಟೆಂಪೋ ಟ್ರಾವೆಲರ್ ಅಳದಂಗಡಿ ಮೂಲಕ ಬೆಳ್ತಂಗಡಿಗೆ ವೇಗವಾಗಿ ಸಾಗುತ್ತಿತ್ತು. ಸ್ಥಳೀಯ ಮಹಿಳೆಯೊಬ್ಬರು ರಸ್ತೆದಾಟುವ ಪ್ರಯತ್ನದಲ್ಲಿದ್ದರು. ಖಾಸಗಿ ಬಸ್ ನಿಂತಿದ್ದರಿಂದ ಅದನ್ನು ಹಿಂದಿಕ್ಕಿ ಮುಂದುವರಿಯುವ ಸಂದರ್ಭದಲ್ಲಿ ಟಿ.ಟಿ ಚಾಲಕನಿಗೆ ಎದುರಿನಲ್ಲಿರುವ ಮಹಿಳೆ ಗಮನಕ್ಕೆ ಬರಲಿಲ್ಲ. ಇತ್ತ ಮಹಿಳೆಗೂ ಬಸ್ ಇದ್ದ ಕಾರಣ ಬಲಗಡೆಯಿಂದ ಟಿ.ಟಿ.ವಾಹನ ಬರುತ್ತಿರುವುದು ಗೋಚರಿಸಿಲ್ಲ. ಟಿ.ಟಿ.ಚಾಲಕನು ಮಹಿಳೆಯ ಪ್ರಾಣ ಉಳಿಸಲು ಎಡಗಡೆಗೆ ವಾಹನ ಚಲಾಯಿಸಬೇಕಾಯಿತು. ಅತಿವೇಗದಲ್ಲಿದ್ದ ಕಾರಣ ವಾಹನ ಚಾಲಕನ ನಿಯಂತ್ರಣಕ್ಕೆ ಬಾರದೆ ಡಿವೈಡರ್‌ಗೆ ಡಿಕ್ಕಿ ಹೊಡೆದು ಉರುಳಿ ಬಿತ್ತು. ಇತ್ತ ಮಹಿಳೆಯು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಉರುಳಿ ಬಿದ್ದ ವಾಹನವನ್ನು ಅಳದಂಗಡಿ ನಾಗರಿಕರೆಲ್ಲ ಸೇರಿ ಎತ್ತಿ ನಿಲ್ಲಿಸಿದ್ದು, ವಾಹನದಲ್ಲಿದ್ದ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಉರುಳಿದ ವಾಹನದ ಎರಡೂ ಚಕ್ರಗಳು ಜಖಂಗೊಂಡಿವೆ. ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದ್ದ ಖಾಸಗಿ ಬಸ್ ಅಪಘಾತದ ಬಳಿಕ ಗುರುವಾಯನಕೆರೆ ಕಡೆಗೆ ಚಲಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net