ರಸ್ತೆ ಅಪಘಾತದಲ್ಲಿ ಯುವಕ ಮೃತ್ಯು

accident new
Published on

ಮಂಗಳೂರು: ನಗರದ ಹೊರವಲಯದ ಕಲ್ಲಾಪು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಉಳ್ಳಾಲ ಸೇತುವೆ ಬಳಿ ಭಾನುವಾರ ಬೆಳಗ್ಗಿನ ಜಾವ ಕಾರೊಂದು ರಸ್ತೆ ಬದಿ ನಿಂತಿದ್ದ ಕಂಟೈನರ್ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಚಾಲಕ ಕಾವೂರು ಗಾಂಧಿ ನಗರದ ನಿವಾಸಿ ಚೇತನ್(21) ಮೃತಪಟ್ಟಿದ್ದು, ಇತರ 5 ಮಂದಿ ಗಾಯಗೊಂಡಿದ್ದಾರೆ.

ಬಿ.ಸಿ.ರೋಡ್‌ನ ರಾಕೇಶ್(24), ಮಂಗಳೂರು ಕಾರ್‌ಸ್ಟ್ರೀಟ್‌ನ ಪ್ರೀತಮ್(18), ಕಾವೂರು ಗಾಂಧಿನಗರದ ಪ್ರತ್ಯುಶ್(21), ಸ್ವರೂಪ್(18) ಮತ್ತು ಅರುಣ್ ಗಟ್ಟಿ(18) ಗಾಯಗೊಂಡವರು.

ಕಾರಿನಲ್ಲಿದ್ದ ಚೇತನ್ ಮತ್ತಿತರರು ತಲಪಾಡಿಯ ತಮ್ಮ ಸಂಬಂಧಿಕರ ಮನೆಯಲ್ಲಿ ಶನಿವಾರ ರಾತ್ರಿ ನಡೆದ ಮೆಹಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಮುಂಜಾನೆ ಅವರು ಮಂಗಳೂರು ಕಡೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ 5 ಗಂಟೆ ವೇಳೆಗೆ ಅಪಘಾತ ಸಂಭವಿಸಿದೆ.

ಕೇರಳದಿಂದ ಮಂಗಳೂರು ಕಡೆ ಹೋಗುತ್ತಿದ್ದ ಕಂಟೈನರ್ ಲಾರಿಯನ್ನು ಡೀಸೆಲ್ ಮುಗಿದ ಕಾರಣ ಕಲ್ಲಾಪುವಿನಲ್ಲಿ ರಸ್ತೆ ಬದಿ ಯಾವುದೇ ಮುಂಜಾಗ್ರತೆ ವಹಿಸದೆ ನಿಲ್ಲಿಸಲಾಗಿತ್ತು. ತಲಪಾಡಿಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಕಾರನ್ನು ಅದರ ಚಾಲಕ ಚೇತನ್ ವೇಗವಾಗಿ ಚಲಾಯಿಸಿದ್ದು, ಕಲ್ಲಾಪು ತಲುಪಿದಾಗ ರಸ್ತೆ ಬದಿ ಇದ್ದ ಕಂಟೈನರ್ ಲಾರಿಯ ಸಮೀಪ ತಲುಪಿದಾಗ ನಿಯಂತ್ರಣ ತಪ್ಪಿ ನೇರವಾಗಿ ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ನಜ್ಜು ಗುಜ್ಜಾಗಿದ್ದು, ಚಾಲಕ ಚೇತನ್ ತೀವ್ರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ.

ಕಾರಿನಲ್ಲಿದ್ದ ಇನ್ನುಳಿದ 5 ಮಂದಿಯ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಈ ಸಂದರ್ಭ ರಸ್ತೆಯಲ್ಲಿ ಬಂದ ಪಿಕಪ್ ವಾಹನದಲ್ಲಿ ಗಾಯಾಳುಗಳನ್ನು ಕರೆ ತಂದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಗಳೂರು ನಗರ ಸಂಚಾರಿ ದಕ್ಷಿಣ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net