

ಉಳ್ಳಾಲ: ಚಲಿಸುತ್ತಿದ್ದ ಸ್ಕೂಟರ್‌ಗೆ ಕಾರು ಡಿಕ್ಕಿಯಾಗಿ ಪರಾರಿಯಾಗಿದ್ದು, ಸ್ಕೂಟರ್ ಸವಾರ ಉಳ್ಳಾಲ ಬಂಡಿಕೊಟ್ಯ ನಿವಾಸಿ ಪುತ್ರ ಉಬೈದುಲ್ಲಾ ಹಸನಬ್ಬ(28) ಎಂಬುವರು ಹಿಂದಿನಿಂದ ಬಂದ ಲಾರಿಯಡಿ ಬಿದ್ದು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಸಹಸವಾರ ಚೆಂಬುಗುಡ್ಡೆ ಮಹಮ್ಮದ್ ಶಾಕೀರ್(18) ಎಂಬುವರು ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಬೈದ್ ಹಾಗೂ ಶಾಕೀರ್ ಶನಿವಾರ ಬೆಳಗ್ಗೆ ಸ್ಕೂಟರ್‌ನಲ್ಲಿ ಮಂಗಳೂರಿನಿಂದ ತೊಕ್ಕೊಟ್ಟು ಕಡೆಗೆ ತೆರಳುತ್ತಿದ್ದರು. ನೇತ್ರಾವತಿ ಸೇತುವೆ ತಲುಪಿದ ಸಂದರ್ಭ ಹಿಂದಿನಿಂದ ಬಂದ ಕಾರು ಸ್ಕೂಟರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ. ಕಾರು ಗುದ್ದಿದ ರಭಸಕ್ಕೆ ನಿಯಂತ್ರಣಕ್ಕೆ ಕಳೆದುಕೊಂಡ ಸ್ಕೂಟರ್ ಅಡ್ಡಬಿದ್ದಿದ್ದು ಅದರಲ್ಲಿದ್ದ ಇಬ್ಬರೂ ರಸ್ತೆಗೆ ಬಿದ್ದಿದ್ದಾರೆ. ಇದೇ ವೇಳೆ ಹಿಂದಿನಿಂದ ಕೇರಳ ಕಡೆಗೆ ಸಿಮೆಂಟ್ ಸಾಗಿಸುತ್ತಿದ್ದ ಲಾರಿ, ಉಬೈದ್ ಮೇಲಿನಿಂದ ಚಲಿಸಿದೆ. ಪರಿಣಾಮ ಉಬೈದ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸ್ಥಳದಿಂದ ಕಾರು ಪರಾರಿಯಾಗಿದ್ದು, ಆಕ್ರೋಶಗೊಂಡ ಸಾರ್ವಜನಿಕರ ಸಹಕಾರದಲ್ಲಿ ಪೊಲೀಸರು ತೊಕ್ಕೊಟ್ಟು ಓವರ್‌ಬ್ರಿಡ್ಜ್ ಬಳಿ ತಡೆದು ಕಾರನ್ನು ವಶಕ್ಕೆ ಪಡೆದಿದ್ದಾರೆ. ಕಾರು ಸೋಮೇಶ್ವರ ಪುರಸಭೆ ಸಿಬ್ಬಂದಿ ಕೃಷ್ಣ ಎಂಬುವರದ್ದಾಗಿದ್ದು, ಘಟನೆ ಸಂದರ್ಭ ಅವರೇ ಚಾಲನೆ ಮಾಡುತ್ತಿದ್ದರು ಎನ್ನಲಾಗಿದೆ. ಮಂಗಳೂರು ಸಂಚಾರಿ ಠಾಣೆಯಲ್ಲಿ ಹಿಟ್ ಆ್ಯಂಡ್ ರನ್ ಪ್ರಕರಣ ದಾಖಲಾಗಿದೆ.
ಮೃತ ಉಬೈದ್ ಅವರಿಗೆ ಜು.23ರಂದು ವಿವಾಹ ನಡೆಯಬೇಕಿದ್ದ ಕಾರಣ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದರು ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಲಾರಿ ಚಾಲಕ ಕಾರ್ಕಳದ ಸುರೇಂದ್ರ ಎಂಬಾತನನ್ನು ಸಂಚಾರಿ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.