

ಮಂಗಳೂರು: ನಗರದ ಯೆಯ್ಯಡಿ ಬಳಿಯ ಶರ್ಬತ್ ಕಟ್ಟೆ ಬಳಿ ಚಲಿಸುತ್ತಿದ್ದ ಸ್ಕೂಟರ್‌ಗೆ ಶ್ವಾನ ಏಕಾಏಕಿ ಅಡ್ಡ ಬಂದ ಪರಿಣಾಮ ಸ್ಕೂಟರ್ ಸ್ಕಿಡ್ ಆಗಿದ್ದು, ಪರಿಣಾಮ ಸವಾರನ ತಲೆ ಡಿವೈಡರ್‌ಗೆ ಬಡಿದು ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.
ಮರೋಳಿ ಬಜ್ಜೋಡಿ ನಿವಾಸಿ ನರಸಿಂಹ ಗಟ್ಟಿ (67) ಮೃತರು. ಶುಕ್ರವಾರ ಬೆಳಗ್ಗೆ ಮರೋಳಿಯ ಮನೆಯಿಂದ ಯೆಯ್ಯಡಿ ಕಡೆಗೆ ಸ್ಕೂಟರಿನಲ್ಲಿ ತೆರಳುತ್ತಿದ್ದ ಸಂದರ್ಭ ಬೀದಿ ನಾಯಿ ರಸ್ತೆಗೆ ಅಡ್ಡ ಬಂದಿದೆ. ಸ್ಕೂಟರ್ ನಿಯಂತ್ರಣ ತಪ್ಪಿದ್ದರಿಂದ ಡಿವೈಡರ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ನರಸಿಂಹ ಗಟ್ಟಿಯವರು ಗಾಯಗೊಂಡಿದ್ದರು. ತಲೆಗೆ ಗಂಭೀರ ಗಾಯಗೊಂಡ ಅವರನ್ನು ಕೂಡಲೇ ಎಜೆ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಸಾವನ್ನಪ್ಪಿದ್ದಾರೆ. ಖಾಸಗಿ ಸಂಸ್ಥೆಯ ಡೀಲರ್ ಶಿಪ್ ಪಡೆದು ವ್ಯವಹಾರ ನಡೆಸುತ್ತಿದ್ದ ನರಸಿಂಹ ಗಟ್ಟಿ ಅವರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.