ದೇವರ ದರ್ಶನಕ್ಕೆ ಹೊರಟಿದ್ದವರು ಮಸಣಕ್ಕೆ; ಶೆರೆವಾಡದಿಂದ ಮೈಲಾರಕ್ಕೆ ಹೊರಟಿದ್ದಾಗ ಅವಘಡ

Mailara Tadas
Published on

ಹಾವೇರಿ: ಹೂವಿನಹಡಗಲಿ ತಾಲೂಕಿನ ಮೈಲಾರಲಿಂಗೇಶ್ವರನ ದರ್ಶನಕ್ಕೆ ಹೊರಟಿದ್ದ ಟ್ರಾೃಕ್ಟರ್‌ಗೆ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಟ್ರಾೃಕ್ಟರ್‌ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಶಿಗ್ಗಾಂವಿ ತಾಲೂಕಿನ ಹೊನ್ನಾಪುರ ಗ್ರಾಮದ ಬಳಿ ಸಂಭವಿಸಿದೆ. ಹುಬ್ಬಳ್ಳಿ ತಾಲೂಕು ಶೆರೆವಾಡ ಗ್ರಾಮದ ಹನುಮಂತಪ್ಪ ಮೂಲಗಿ (54) ಹಾಗೂ ಚಂದ್ರು ಶಿರಕೋಳ (45) ಮೃತಪಟ್ಟವರು. ಶೆರೇವಾಡ ಗ್ರಾಮದಿಂದ ಟ್ರಾೃಕ್ಟರ್ ಮೂಲಕ ಹಾವೇರಿ ಗುತ್ತಲ ಮಾರ್ಗವಾಗಿ ಮೈಲಾರ ಜಾತ್ರೆಗೆ ಹೊರಟಿದ್ದರು. ಹನುಮಂತಪ್ಪ, ಚಂದ್ರು ಸೇರಿದಂತೆ ಐದಾರು ಜನ ಟ್ರಾೃಕ್ಟರ್ ಟ್ರೇಲರ್ ಹಿಂಭಾಗದಲ್ಲಿ ಕಾಲು ಕೆಳಗೆ ಬಿಟ್ಟು ಕುಳಿತುಕೊಂಡು ಬರುತ್ತಿದ್ದರು. ಈ ವೇಳೆ ಹಿಂದಿನಿಂದ ಶರವೇಗದಲ್ಲಿ ಬಂದ ಮಾರುತಿ ಸುಜುಕಿ ಸ್ವಿಫ್ಟ್ ಕಾರು ಟ್ರಾೃಕ್ಟರ್‌ಗೆ ಗುದ್ದಿದೆ. ಗುದ್ದಿದ ರಭಸಕ್ಕೆ ಟ್ರಾೃಕ್ಟರ್‌ನಲ್ಲಿದ್ದವರು ರಸ್ತೆ ಮೇಲೆ ಬಿದ್ದಿದ್ದಾರೆ. ಹನುಮಂತಪ್ಪ ಹಾಗೂ ಚಂದ್ರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ತಡಸ ಪೊಲೀಸರು ಧಾವಿಸಿ, ಗಾಯಾಳುಗಳನ್ನು ಆಂಬುಲೆನ್ಸ್ ಮೂಲಕ ಕಿಮ್ಸ್‌ಗೆ ರವಾನಿಸಿದರು. ಕಾರಿನಲ್ಲಿದ್ದ ಇಬ್ಬರಿಗೂ ಗಾಯಗಳಾಗಿದ್ದು, ಟ್ರಾಕ್ಟರ್‌ನಲ್ಲಿದ್ದ ಓರ್ವನ ಪರಿಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತಡಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳದಲ್ಲಿ ಮೃತಪಟ್ಟವರ ಆಕ್ರಂದನ ಮುಗಿಲು ಮುಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net