ವೇಗವಾಗಿ ಚಲಿಸುತ್ತಿದ್ದ ಕಾರು ಪಲ್ಟಿ: ಬಿಜೆಪಿಯ ಕೊಪ್ಪಳ ಶಹರ ಘಟಕದ ಮಾಜಿ ಅಧ್ಯಕ್ಷರ ಕುಟುಂಬದ 17 ತಿಂಗಳ ಮಗು ಸೇರಿ ಮೂವರ ದುರ್ಮರಣ

9-gdg-12
Published on

ಗದಗ: ವೇಗವಾಗಿ ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದರಿಂದ 17 ತಿಂಗಳ ಮಗು ಸೇರಿ ಒಂದೇ ಕುಟುಂಬದ ಮೂವರು ಮೃತಪಟ್ಟ ಹೃದಯ ವಿದ್ರಾವಕ ಘಟನೆ ತಾಲೂಕಿನ ಲಕ್ಕುಂಡಿ ಗ್ರಾಮದ ಹೊರವಲಯದ ಬೂದಿಬಸವೇಶ್ವರ ದೇವಸ್ಥಾನದ ಬಳಿ ಸೋಮವಾರ ಸಂಭವಿಸಿದೆ.

ಕೊಪ್ಪಳ ಶಹರ ಘಟಕದ ಬಿಜೆಪಿ ಮಾಜಿ ಅಧ್ಯಕ್ಷ ಶಿವಕುಮಾರ ಅವರ ಅತ್ತೆ ಗಂಗಾವತಿಯ ಪ್ರಮೀಳಾ ಮಸ್ಕಿ(70), ಪತ್ನಿ ಪೂರ್ಣಿಮಾ ಹಕ್ಕಾಪಕ್ಕಿ (45), ಮಗ ಆರ್ಯ (17 ತಿಂಗಳು ಮಗು) ಮೃತ ದುರ್ದೈವಿಗಳು.

ಕಾರಿನಲ್ಲಿ ಮಗು ಸೇರಿ ಒಟ್ಟು ಆರು ಜನರಿದ್ದರು. ಈ ಪೈಕಿ ಮೂವರು ಮೃತಪಟ್ಟಿದ್ದು, ಗಾಯಾಳುಗಳಾದ ಶಿವಕುಮಾರ ಹಕ್ಕಾಪಕ್ಕಿ ಹಾಗೂ ಅವರ ಮಾವ ಮಲ್ಲಿಕಾರ್ಜುನ ಮಸ್ಕಿ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಅವಳಿಜವಳಿ ಮಕ್ಕಳಲ್ಲಿ ಗಂಡು ಮಗು ಆರ್ಯ ಸಾವನ್ನಪ್ಪಿದ್ದು ಹೆಣ್ಣು ಮಗು ಆಧ್ಯಾ ಪವಾಡಸದೃಶ ರೀತಿಯಲ್ಲಿ ಪಾರಾಗಿದೆ. ಶಿವಕುಮಾರ ಹಕ್ಕಾಪಕ್ಕಿ ಅವರು ಕಾರು ಚಾಲನೆ ಮಾಡುತ್ತಿದ್ದರು. ಬೂದಿಬಸವೇಶ್ವರ ದೇವಸ್ಥಾನದ ಬಳಿ ತಿರುವು ದಾಟುವ ಸಂದರ್ಭದಲ್ಲಿ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿ ರಸ್ತೆಯಿಂದ ಕೆಳಗೆ ಬಿದ್ದಿದೆ ಎಂದು ಗದಗ ಗ್ರಾಮೀಣ ಠಾಣೆ ಸಿಪಿಐ ರವಿರಾಜ ಕಪ್ಪತ್ತನವರ ವಿಜಯವಾಣಿಗೆ ತಿಳಿಸಿದ್ದಾರೆ.

ಕಾಪಾಡಲಿಲ್ಲ ಕಾಮಣ್ಣ !: ಶಿವಕುಮಾರ ಹಕ್ಕಾಪಕ್ಕಿ ಮತ್ತು ಪೂರ್ಣಿಮಾ ದಂಪತಿಗೆ ಮದುವೆಯಾಗಿ 18 ವರ್ಷಗಳಾದರೂ ಮಕ್ಕಳಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ನವಲಗುಂದದ ರಾಮಲಿಂಗ ಹೋಳಿ ಕಾಮಣ್ಣನಿಗೆ ಹರಕೆ ಕಟ್ಟಿಕೊಂಡಿದ್ದರು. ಹರಕೆ ಹೊತ್ತು ಒಂದೂವರೆ ವರ್ಷದ ನಂತರ ಹಕ್ಕಾಪಕ್ಕಿ ದಂಪತಿಗೆ ಅವಳಿಜವಳಿ ಮಕ್ಕಳಾಗಿದ್ದರು. ಹೀಗಾಗಿ, ಹರಕೆ ತೀರಿಸಲೆಂದು ಸೋಮವಾರ ನವಲಗುಂದಕ್ಕೆ ತೆರಳಿ ರಾಮಲಿಂಗ ಹೋಳಿ ಕಾಮಣ್ಣನಿಗೆ ಹರಕೆ ತೀರಿಸಿ ಕೊಪ್ಪಳಕ್ಕೆ ವಾಪಸಾಗುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಅಪಘಾತದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಯುವತಿ ಸಾವು, ಹಲವರಿಗೆ ಗಾಯ

ಶಿರಹಟ್ಟಿ: ಸಮೀಪದ ಹಂಗನಕಟ್ಟಿ ಕ್ರಾಸ್ ಹತ್ತಿರ ಕೆಎಸ್​ಆರ್​ಟಿಸಿ ಬಸ್ ಕಂದಕಕ್ಕೆ ಉರುಳಿದ್ದರಿಂದ ಬಸ್​ನಲ್ಲಿದ್ದ ವಿದ್ಯಾರ್ಥಿನಿಯೋರ್ವಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು ಡ್ರೖೆವರ್ ಸೇರಿ 20 ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡ ಘಟನೆ ಸೋಮವಾರ ಸಂಜೆ ಜರುಗಿದೆ.

ಬಸ್ ಶಿರಹಟ್ಟಿಯಿಂದ ಮುಂಡರಗಿಗೆ ಹೋಗುತ್ತಿತ್ತು. ಗದಗ ತಾಲೂಕಿನ ಹಂಗನಕಟ್ಟಿ ಗ್ರಾಮದ ಕ್ರಾಸ್ ಹತ್ತಿರ ಬಸ್ಸಿನ ಸ್ಟೇರಿಂಗ್ ಕಟ್ ಆಗಿದ್ದರಿಂದ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದಿದೆ. ಬಸ್ಸಿನಲ್ಲಿದ್ದ ಶಿರಹಟ್ಟಿಯ ಡಬಾಲಿ ಹೈಸ್ಕೂಲ್​ನ 9 ನೇ ತರಗತಿ ವಿದ್ಯಾರ್ಥಿನಿ ಜಲ್ಲಿಗೇರಿಯ ವಿದ್ಯಾ ಯಲ್ಲಪ್ಪ ಡೊಂಕಬಳ್ಳಿ (15) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ಚಾಲಕ ಹಿರೇವಡ್ಡಟ್ಟಿಯ ಶಿವರಾಜಪ್ಪ ಮಾಳಗೊಂಡರ ಸ್ಥಿತಿ ಗಂಭೀರವಾಗಿದೆ. ಬಸ್ಸಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿದ್ದರು. ಕಂಡಕ್ಟರ್ ಸೇರಿ ಇತರ ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net