ಕಾರುಗಳ ಡಿಕ್ಕಿಯಿಂದ ಮಾತಿನ ಚಕಮಕಿ, ಗುಂಪು ಚದುರಿಸಲು ಪೊಲೀಸರಿಂದ ಲಾಠಿ ಪ್ರಹಾರ

webbbb
Published on

ವಿಟ್ಲ: ಮಂಗಳೂರು-ಬೆಂಗಳೂರು ಹೆದ್ದಾರಿಯ ಮಾಣಿ ಸಮೀಪ ಶುಕ್ರವಾರ ಎರಡು ಕಾರುಗಳು ಡಿಕ್ಕಿಯಾಗಿ ಓರ್ವನಿಗೆ ಗಾಯವಾಗಿದೆ. ಈ ಸಂದರ್ಭ ಸ್ಥಳದಲ್ಲಿ ಎರಡು ತಂಡಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ವಿಕೋಪಕ್ಕೆ ಹೋಗುತ್ತಿದ್ದಂತೆ ವಿಟ್ಲ ಪೊಲೀಸರು ಲಾಠಿ ಬೀಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.

ಬೆಂಗಳೂರು ಮೂಲದ ಆದಿಮೂರ್ತಿ(60) ಗಾಯಾಳು. ಕಾರು ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದು, ಉಪ್ಪಿನಂಗಡಿ ಕಡೆಯ ಕಾರು ಕಲ್ಲಡ್ಕದಿಂದ ಉಪ್ಪಿನಂಗಡಿಗೆ ತೆರಳುತ್ತಿದ್ದಾಗ ಅಪಘಾತವಾಗಿದೆ. ಈ ವೇಳೆ ಸ್ಥಳದಲ್ಲಿ ಮಾತಿನ ಚಕಮಕಿ ನಡೆದು, ಇತ್ತಂಡದವರು ಪರಸ್ಪರ ಹಲ್ಲೆಗೆ ಮುಂದಾಗಿದ್ದರು. ಘಟನೆ ತಾರಕಕ್ಕೇರುತ್ತಿದ್ದಂತೆ ಎರಡೂ ಕಡೆಯ ಜನ ಜಮಾಯಿಸಿ, ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಳ್ಳುತ್ತಿದ್ದಂತೆ ವಿಟ್ಲ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಿಸಲು ಲಾಠಿ ಬೀಸಿದರು. ಜನರು ದಿಕ್ಕಾಪಾಲಾಗಿ ಓಡಿದರು. ಎರಡು ವಾಹನಗಳನ್ನೂ ವಶಕ್ಕೆ ಪಡೆದ ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಘಟನೆಯಿಂದ ಹೆದ್ದಾರಿಯಲ್ಲಿ ಕೆಲ ಹೊತ್ತು ವಾಹನ ಸಂಚಾರಕ್ಕೆ ಸಮಸ್ಯೆಯಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net