

ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲ ಹನಫಿ ಮಸೀದಿ ಬಳಿ ಕೆಟ್ಟು ನಿಂತಿದ್ದ ಲಾರಿಗೆ ಮಂಗಳವಾರ ಮುಂಜಾನೆ ಉಡುಪಿ ಕಡೆಯಿಂದ ಮಂಗಳೂರಿನತ್ತ ನೀರುಳ್ಳಿ ಹೇರಿಕೊಂಡು ಸಾಗುತ್ತಿದ್ದ ಲಾರಿ ಡಿಕ್ಕಿಯಾಗಿ ಕೆಟ್ಟು ನಿಂತಿದ್ದ ಲಾರಿ ಚಾಲಕ ಕಲಘಟಗಿ ಮಾಂತೇಶ್ ಗೌಳಿ (33) ಮೃತಪಟಟ್ಟಿದ್ದಾರೆ.
ಹುಬ್ಬಳ್ಳಿಯಿಂದ ಕಡಲೆ ಹಿಟ್ಟು ಹೊತ್ತು ಮಂಗಳೂರು ಕಡೆಗೆ ಸಾಗುತ್ತಿದ್ದ ಲಾರಿ ಆ್ಯಕ್ಸಿಲ್ ತುಂಡಾಗಿ ಕೆಟ್ಟು ನಿಂತಿದ್ದು, ಚಾಲಕ ಮಾಂತೇಶ್ ಲಾರಿಯ ಸುತ್ತ ಕಲ್ಲು ಮತ್ತು ಮರದ ಟೊಂಗೆ ಇರಿಸಿ, ದುರಸ್ತಿ ಮಾಡುತ್ತಿದ್ದರು. ಅ ವೇಳೆ ಮಂಗಳೂರು ಕಡೆ ಸಂಚರಿಸುತ್ತಿದ್ದ ಇನ್ನೊಂದು ಲಾರಿ ಕೆಟ್ಟು ನಿಂತಿದ್ದ ಲಾರಿ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತ ತೀವ್ರತೆಗೆ ಎರಡೂ ಲಾರಿಗಳು ಮಗುಚಿ ಬಿದ್ದು ಕೆಟ್ಟು ನಿಂತ ಲಾರಿ ಎಕ್ಸ್ಸೆಲ್ ಸಹಿತ ನಾಲ್ಕೂ ಚಕ್ರ ಬೇರ್ಪಟ್ಟು ಲಾರಿ ನಜ್ಜುಗುಜ್ಜಾಗಿದೆ. ಡಿಕ್ಕಿ ಹೊಡೆದ ಲಾರಿ ಚಾಲಕ ಚಿಕ್ಕಮಗಳೂರು ಹೊನ್ನುಳ್ಳಿಯ ಅಬ್ದುಲ್ ಸಲಾಂ(50) ಗಾಯಗೊಂಡಿದ್ದಾರೆ. ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿರುವ ಪಡುಬಿದ್ರಿ ಪೊಲೀಸರು ಸ್ಥಳೀಯರ ಸಹಕಾರದಿಂದ ಲಾರಿಯಲ್ಲಿದ್ದ ಸರಕುಗಳನ್ನು ಖಾಲಿ ಮಾಡಿ ವಾಹನವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿದರು.