ಅಪಘಾತಗಳ ಹಾಟ್‌ಸ್ಪಾಟ್ : ರಟ್ಟಿಹಳ್ಳಿಯ ಭಗತ್‌ಸಿಂಗ್, ಹೊಸ ಬಸ್ ನಿಲ್ದಾಣದ ವೃತ್ತದಲ್ಲಿಲ್ಲ ಸೂಚನಾ ಫಲಕ

Rattihalli Bhagath Singh Circle
Published on

ರಟ್ಟಿಹಳ್ಳಿ: ಪಟ್ಟಣದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ನಾಲ್ಕರ ಕ್ರಾಸ್‌ನ ಭಗತ್‌ಸಿಂಗ್ ವೃತ್ತ ಮತ್ತು ಹೊಸ ಬಸ್ ನಿಲ್ದಾಣದ ವೃತ್ತಗಳು ಅಪಘಾತಗಳ ಹಾಟ್‌ಸ್ಪಾಟ್‌ಗಳಾಗಿ ಪರಿಣಮಿಸಿವೆ. ಇಲ್ಲಿ ಪದೇಪದೆ ಅಪಘಾತಗಳು ಸಂಭವಿಸುತ್ತಿದ್ದರೂ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಥವಾ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಯಾವುದೇ ಮುನ್ಸೂಚನಾ ಫಲಕಗಳನ್ನು ಅಳವಡಿಸದಿರುವುದು ಆಶ್ಚರ್ಯ ಮೂಡಿಸುತ್ತದೆ.

ಪಟ್ಟಣದ ವ್ಯಾಪ್ತಿಯಲ್ಲಿ ಕಳೆದ ಒಂದು ವರ್ಷದಿಂದ ರಟ್ಟಿಹಳ್ಳಿ ಮಾಸೂರು ರಾಣೆಬೆನ್ನೂರು ಮುಖ್ಯ ಹೆದ್ದಾರಿಯಲ್ಲಿ ಸುಮಾರು 3 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ವಿಭಾಗದಿಂದ ರಸ್ತೆ ಅಗಲೀಕರಣ ಮತ್ತು ಹೆದ್ದಾರಿ ರಸ್ತೆ ನಿರ್ಮಾಣ ಮಾಡಲಾಗಿದೆ. ರಾಣೆಬೆನ್ನೂರಿನಿಂದ ರಟ್ಟಿಹಳ್ಳಿ ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ಹೊಸ ಬಸ್ ನಿಲ್ದಾಣ ವೃತ್ತದಲ್ಲಿ ಪಟ್ಟಣ ಪ್ರವೇಶಿಸುವ ಎರಡು ರಸ್ತೆಗಳಲ್ಲಿ ಹೆಚ್ಚಿನ ವಾಹಣ ಸಂಚಾರವಿರುತ್ತದೆ.

ಹೊಸ ಬಸ್ ನಿಲ್ದಾಣ ವೃತ್ತದ ಬಳಿಕ ಸ್ವಲ್ಪ ದೂರದಲ್ಲಿ ಭಗತ್‌ಸಿಂಗ್ ವೃತ್ತ ಇದ್ದು, ಈ ಹೆದ್ದಾರಿಗೆ ಹೊಂದಿಕೊಂಡಂತೆ ಪಟ್ಟಣಕ್ಕೆ ಮತ್ತು ಹಿರೇಕೆರೂರಿಗೆ ಹೋಗುವ ಲೋಕಪಯೋಗಿ ಇಲಾಖೆಯ ರಸ್ತೆಗಳಿವೆ. ಈ ಎರಡೂ ವೃತ್ತಗಳ ಹೆದ್ದಾರಿಯಲ್ಲಿ ಪ್ರತಿ ನಿತ್ಯ ನೂರಾರು ಸಂಖ್ಯೆಯ ವಾಹನಗಳು ವೇಗವಾಗಿ ಚಲಿಸುತ್ತವೆ. ಆದರೆ, ಈ ವೃತ್ತಗಳಲ್ಲಿ ಯಾವುದೇ ಮುನ್ನಚ್ಚರಿಕೆಯ ಫಲಕಗಳು, ನಿಧಾನಗತಿ ವಾಹನಗಳು ಚಲಿಸುವಂತೆ ಸೂಚಿಸುವ ನಾಮಫಲಕಗಳು, ವೇಗ ನಿಯಂತ್ರಕಗಳು, ಮಾರ್ಕಿಂಗ್ ಪಟ್ಟಿಗಳು ಇಲ್ಲ. ಹೀಗಾಗಿ ಇಲ್ಲಿ ಪದೇಪದೆ ಅಪಘಾತಗಳ ಸರಣಿಯೇ ನಡೆಯುತ್ತಿರುತ್ತವೆ.

ಭಗತ್‌ಸಿಂಗ್ ವೃತ್ತದಲ್ಲಿ ಹೆಚ್ಚಾಗಿ ಶಾಲೆಗಳು ಇರುವುದರಿಂದ ಇಲ್ಲಿ ಶಾಲಾ ಮಕ್ಕಳು ಓಡಾಟ ಹೆಚ್ಚಿರುತ್ತವೆ. ಇಲ್ಲಿಯೇ ಬಸ್ ತಂಗುದಾಣ ಇರುವುವದರಿಂದ ಪ್ರಯಾಣಿಕರು ಹೆಚ್ಚಿನ ಸಂಖ್ಯೆಲ್ಲಿ ವಾಹನಗಳಿಗೆ ಕಾಯುತ್ತಿರುತ್ತಾರೆ. ಸದಾ ಜನನಿಬಿಡ ಸ್ಥಳಗಳಾಗಿರುವ ಈ ಎರಡು ವೃತ್ತಗಳಲ್ಲಿ ನಿಧಾನಗತಿಯಲ್ಲಿ ವಾಹನಗಳು ಚಲಿಸಬೇಕು. ಆದರೆ, ಇಲ್ಲಿ ಲೋಕೋಪಯೋಗಿ ಇಲಾಖೆಯಿಂದ ಯಾವುದೇ ನಿರ್ಬಂಧ ಇಲ್ಲದಿರುವುದು ಅಪಾಯಕ್ಕೆ ಕಾರಣವಾಗಿದೆ.

ಭಗತ್‌ಸಿಂಗ್ ವೃತ್ತದಲ್ಲಿ ರಸ್ತೆಯ ಬದಿಯಲ್ಲಿ ನಿಂತಿದ್ದ ಓರ್ವ ವ್ಯಕ್ತಿ ಏ. 2ರಂದು ಟಿಪ್ಪರ ಗಾಲಿಗೆ ಬಿದ್ದು ಮೃತಪಟ್ಟಿದ್ದಾರೆ. ವಾಹನಗಳು ಪದೇಪದೆ ಮುಖಾಮುಖಿ ಡಿಕ್ಕಿಯಾಗಿ ಸಾವು, ನೋವು ಸಂಭವಿಸುತ್ತಿರುತ್ತವೆ. ವಾರದಲ್ಲಿ ಐದಾರು ಅಪಘಾತಗಳು ಸರ್ವೇ ಸಾಮಾನ್ಯ ಎಂಬಂತಾಗಿದೆ. ತಕ್ಷಣ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಭಗತ್‌ಸಿಂಗ್ ವೃತ್ತ ಮತ್ತು ಹೊಸ ಬಸ್ ನಿಲ್ದಾಣದ ವೃತ್ತಗಳಲ್ಲಿ ಹಲವು ಅಪಘಾತಗಳು ಸಂಭವಿಸುತ್ತಿವೆ. ಈ ಹೆದ್ದಾರಿಗೆ ಮತ್ತು ಲೋಕಪಯೋಗಿ ಇಲಾಖೆಯ ರಸ್ತೆಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ತಾತ್ಕಾಲಿಕವಾಗಿ ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದಾರೆ. ಆದರೆ, ಶೀಘ್ರವಾಗಿ ಮುನ್ನಚ್ಚರಿಕೆ ಕ್ರಮ ಕೈಗೊಂಡು ಸಾವು ನೋವುಗಳನ್ನು ತಪ್ಪಿಸಬೇಕಾಗಿದೆ. ಗಣೇಶ ಅಡ್ಮನಿ, ಸ್ಥಳೀಯ ನಿವಾಸಿ ರಟ್ಟಿಹಳ್ಳಿ ಭಗತ್‌ಸಿಂಗ್ ಮತ್ತು ಹೊಸ ಬಸ್ ನಿಲ್ದಾಣ ವೃತ್ತಗಳಲ್ಲಿ ಶೀಘ್ರದಲ್ಲಿಯೇ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು. ಸಂಭಂದಿಸಿದ ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳೊಂದಿಗೆ ಚರ್ಚಿಸಿ ಎಚ್ಚರಿಕೆ ವಹಿಸಲಾಗುವುದು. ಮಾಲತೇಶ ಕಲ್ಲಮ್ಮನವರ, ಮುಖ್ಯ ಇಂಜಿನಿಯರ್, ಲೋಕೋಪಯೋಗಿ ಇಲಾಖೆ ಹಿರೇಕೆರೂರು-ರಟ್ಟಿಹಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net