

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಾರಿಗೆ ಸಂಸ್ಥೆಯಲ್ಲಿ 34 ವರ್ಷಗಳ ಕಾಲ ಸೇವೆ ಸಲ್ಲಿಸಿದ, ಒಂದೂ ಅಪಘಾತ ಇಲ್ಲದೆ ಅತ್ಯುತ್ತಮ ಚಾಲಕ ಎಂದು ಮುಖ್ಯಮಂತ್ರಿ ಪದಕ ಪಡೆದ ಗಿರಿಗೌಡ ಸಿದ್ದಾಪುರ ಶುಕ್ರವಾರ ಸೇವಾ ನಿವೃತ್ತಿ ಹೊಂದಿದರು.
ಕೆಲಗೇರಿ ನಿವಾಸಿ ಗಿರಿಗೌಡ ಅವರು 1989ರಲ್ಲಿ ಧಾರವಾಡ ವಿಭಾಗದಿಂದ ಸೇವೆ ಆರಂಭಿಸಿ ತಿರುಪತಿ, ಬಾಗಲಕೋಟೆ, ಧಾರವಾಡ ಗ್ರಾಮೀಣ ಭಾಗದಲ್ಲಿ 14 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಉಳಿದ 20 ವರ್ಷಗಳ ಸೇವೆಯನ್ನು ಧಾರವಾಡ-ಕೆಲಗೇರಿ ಆಂಜನೇಯನಗರ ಮಾರ್ಗ ಸಲ್ಲಿಸಿದ್ದು ಧಾರವಾಡ ವಿಭಾಗದಲ್ಲಿ ದಾಖಲೆಯೇ ಸರಿ. 2007ರಲ್ಲಿ 15 ವರ್ಷ ಕಾಲ ಅಪಘಾತ ರಹಿತ ಚಾಲನೆಗೆ ಮುಖ್ಯಮಂತ್ರಿ ಪದಕ ಪಡೆದಿದ್ದಾರೆ. ಅಂದಿನ ಸಿಎಂ ಬಿ.ಎಸ್. ಯಡಿಯೂರಪ್ಪ ಪದಕ ಪ್ರಧಾನ ಮಾಡಿದ್ದರು. ಹುಬ್ಬಳ್ಳಿ ವಿಭಾಗದಿಂದ ಸುರಕ್ಷಾ ಚಾಲಕ ಪ್ರಶಸ್ತಿ ಸಹ ಪಡೆದಿದ್ದಾರೆ.
ನಗರದ ಬಸ್ ಡಿಪೋದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಸೇವಾ ನಿವೃತ್ತಿ ಹೊಂದಿದ ಗಿರಿಗೌಡ ಹಾಗೂ ನಿರ್ವಾಹಕ ಈರಣ್ಣ ಉಳ್ಳಿಗೇರಿ ಅವರಿಗೆ ಸನ್ಮಾನಿಸಲಾಯಿತು. ನಂತರ ಡಿಪೋ ಮ್ಯಾನೇಜರ್ ಮಲ್ಲಪ್ಪ ಜಿರಿಗವಾಡ ಮಾತನಾಡಿ, ಸುಮಾರು ಮೂರು ದಶಕಗಳ ಕಾಲ ಸಂಸ್ಥೆಯಲ್ಲಿ ಜವಾಬ್ದಾರಿಯುತ ಸೇವೆ ಸಲ್ಲಿಸಿದ್ದಾರೆ. ಅವರ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ಹಾರೈಸಿದರು.
ಘಟಕ ವ್ಯವಸ್ಥಾಪಕ ಅನಿಲಕುಮಾರ ಹಳ್ಳದ, ಸಂಚಾರಿ ನಿರೀಕ್ಷಕ ಸಂಗಮೇಶ ಮಸ್ಕಿ, ನಿರ್ವಾಹಕ ಸಂಜು ಪುಡಕಲಕಟ್ಟಿ, ಚಾಲಕ ಎಸ್.ವಿ. ಭಾಸ್ಲಾಪುರ, ಇತರರು ಇದ್ದರು.