

ಬೆಂಗಳೂರು: ಹೋಳಿ ಹಬ್ಬ ಮಾಡಲು ಹೋಗಿ ಹೊಡೆದಾಟ ಮಾಡಿರುವ ಘಟನೆ ಬೆಂಗಳೂರಿನ ತಾಜ್ ಹೋಟೆಲ್ ಬಳಿ ನಡೆದಿದೆ.
ಇಂದು ಹೋಳಿ ಹಬ್ಬವಿರುವ ಪ್ರಯುಕ್ತ ಕಾರೊಂದರಲ್ಲಿ ನಾಲ್ಕೈದು ಯುವಕರು ಬಣ್ಣ ಎರಚುತ್ತಾ ಸಾಗುತ್ತಿದ್ದರು. ಈ ಸಮಯದಲ್ಲಿ ಎದುರಿಗೆ ಬಂದ ಇನ್ನೊಂದು ಕಾರಿಗೆ ಈ ಕಾರು ಡಿಕ್ಕಿ ಹೊಡೆದಿದೆ. ಪೊಲೋ ಮತ್ತು ಎಕ್ಸ್ಯೂವಿ ಕಾರುಗಳು ಡಿಕ್ಕಿ ಹೊಡೆಯುತ್ತಿದ್ದಂತೆ ಕಾರಲ್ಲಿದ್ದ ಯುವಕರ ಗುಂಪು ಜಗಳ ಆರಂಭಿಸಿದೆ. ಜಗಳ ತಾರಕಕ್ಕೇರಿದ್ದು ಪರಸ್ಪರ ಹೊಡೆದಾಟ ನಡೆದಿದೆ. ಹೈಗ್ರೌಂಡ್ಸ್ನ ಪೊಲೀಸ್ ಠಾಣೆಯ ವ್ಯಾಪ್ತಿಯ ತಾಜ್ ವೆಸ್ಟ್ ಎಂಡ್ ಬಳಿ ಈ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಯುವಕರು ಕಾಲ್ಕಿತ್ತಿದ್ದಾರೆ.
ಈ ಘಟನೆಯಲ್ಲಿ ಪ್ರಭಾವಿ ವ್ಯಕ್ತಿಗಳ ಮಕ್ಕಳು ಭಾಗಿಯಾಗಿದ್ದಾರೆ ಎನ್ನಲಾಗಿದೆ. ಘಟನೆಯ ಬಗ್ಗೆ ಮಾಹಿತಿ ನೀಡಲು ಪೊಲೀಸರು ನಿರಾಕರಿಸಿದ್ದು ಸಾಕಷ್ಟು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ. ಅಪಘಾತವಾದ ಎರಡು ಕಾರುಗಳಲ್ಲಿ ಒಂದು ಕಾರನ್ನು ಮಾತ್ರ ಜಪ್ತಿ ಮಾಡಲಾಗಿದ್ದು, ಇನ್ನೊಂದು ಕಾರಿನ ಬಗ್ಗೆ ಮಾಹಿತಿ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್)