ಹೆದ್ದಾರಿ ಬದಿಯಲ್ಲಿ ವಾಹನಗಳ ನಿಲುಗಡೆಯಿಂದ ಅಪಘಾತ

Published on

ಸುಂಟಿಕೊಪ್ಪ: ಪಟ್ಟಣದ ಮಧ್ಯಭಾಗದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ತುಂಬ ಕಿರಿದಾಗಿದ್ದು ಹಲವು ಅಪಘಾತಗಳು ಸಂಭವಿಸಿ ಅದೇಷ್ಟೋ ಜನರು ಜೀವ ಕಳೆದುಕೊಂಡ ನಿದರ್ಶನಗಳು ಜನಮಾನಸದಲ್ಲಿ ಉಳಿದಿದೆ.

ರಾಷ್ಟ್ರೀಯ ಹೆದ್ದಾರಿ-275ರಲ್ಲಿ ಕುಶಾಲನಗರದಿಂದ ಮಾಣಿ ಸಂಪರ್ಕ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆ. ಹೆದ್ದಾರಿಯಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿರುತ್ತವೆ. ಹೆದ್ದಾರಿಯ ಇಕ್ಕೆಲೆಗಳಲ್ಲಿರುವ ವಾಣಿಜ್ಯ ಮಳಿಗೆಗಳು ಹಾಗೂ ಕಲ್ಯಾಣ ಮಂಟಪಗಳಿಗೆ ಹೋಗುವ ಜನರು ವಾಹನಗಳನ್ನು ಮನಬಂದಂತೆ ಹೆದ್ದಾರಿಯ ಎರಡೂ ಬದಿಯಲ್ಲಿ ನಿಲ್ಲಿಸುತ್ತಿರುವುದರಿಂದ ವಾಹನಗಳ ದಟ್ಟಣೆಯಿಂದ ಹೆದ್ದಾರಿಯಲ್ಲಿ ಬಸ್, ಟ್ರಕ್, ಕಾರು, ಜೀಪ್ ಹಾಗೂ ತುರ್ತು ಚಿಕಿತ್ಸೆಗಾಗಿ ತೆರಳುವ ಆಂಬುಲೆನ್ಸ್ ಸುಗಮವಾಗಿ ಸಂಚರಿಸಲು ಪರದಾಡುವ ಪರಿಸ್ಥಿತಿ ಎದುರಾಗಿದೆ.

ರಾಷ್ಟ್ರೀಯ ಹೆದ್ದಾರಿಯ ಸುಂಟಿಕೊಪ್ಪದಿಂದ ಗದ್ದೆಹಳ್ಳದವರೆಗೆ ತಿರುವುಗಳಿಂದ ಕೂಡಿದ್ದು, ಹೆದ್ದಾರಿಯ ಎರಡೂ ಬದಿಯಲ್ಲಿ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ರಾಷ್ಟ್ರೀಯ ಹೆದ್ದಾರಿಯು ಕಿರಿದಾಗಿದೆ. ಇದರಿಂದ ಹೆದ್ದಾರಿಯಲ್ಲಿ 2 ವಾಹನಗಳು ಸುಗಮವಾಗಿ ಸಂಚರಿಸುವುದು ಕ್ಲಿಷ್ಟಕರ ಅಲ್ಲದೆ ಅಪಘಾತಗಳಿಗೆ ಪರೋಕ್ಷವಾಗಿ ಆಹ್ವಾನ ನೀಡುವಂತಿದೆ. ಇಲ್ಲಿ ಅಪಘಾತಗಳು ಸಂಭವಿಸಿದಾಗ ಅದೆಷ್ಟೋ ವಾಹನ ಸವಾರರು ಜೀವ ಕಳೆದುಕೊಂಡಿದ್ದಾರೆ. ಮತ್ತಷ್ಟು ಜನರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ.

ಬಹುಪಯೋಗಿ ಕಟ್ಟಡಗಳನ್ನು ಕಟ್ಟುವ ಸಂದರ್ಭ ನೆಲ ಅಂತಸ್ತಿನಲ್ಲಿ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳನ್ನು ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸುವುದು ಅತ್ಯಗತ್ಯವಾಗಿದೆ. ಕಟ್ಟಡ ನಿರ್ಮಾಣ ಸಂದರ್ಭದಲ್ಲೇ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಬೇಕೆಂಬ ಷರತ್ತು ವಿಧಿಸಿಯೇ ಅನುಮತಿ ಪತ್ರವನ್ನು ಸಂಬಂಧಿಸಿದ ಇಲಾಖೆ ನೀಡಬೇಕಾಗಿದೆ. ಆದರೆ ಈ ನಿಯಮವನ್ನು ಪಾಲಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಅಧಿಕಾರಿಗಳು. ರಸ್ತೆ ಬದಿಯ ಎರಡೂ ಕಡೆ ವಾಹನ ನಿಲುಗಡೆಗೊಂಡು ಸಮಸ್ಯೆ ಎದುರಾಗುತ್ತಿದೆ. ವಿಶೇಷವಾಗಿ ವಾರಾಂತ್ಯಗಳಲ್ಲಿ ಮತ್ತು ಸರಣಿ ರಜೆ ದಿನಗಳಲ್ಲಿ ಪ್ರವಾಸಿಗರ ವಾಹನಗಳ ದಟ್ಟಣೆ ಹೆಚ್ಚಾಗಿ ಕಂಡುಬರುತ್ತಿದ್ದು, ಹೆದ್ದಾರಿಯ ಇಕ್ಕೆಲಗಳಲ್ಲಿ, ತಿರುವು ಪ್ರದೇಶಗಳಲ್ಲಿ ವಾಹನಗಳನ್ನು ಮನಬಂದಂತೆ ನಿಲುಗಡೆ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗ್ರಾಮ ಪಂಚಾಯಿತಿ, ಪೊಲೀಸ್ ಇಲಾಖೆ ಅಪಾಯ ಸಂಭವಿಸುವ ಮುನ್ನ ಎಚ್ಚೆತ್ತು ವಾಹನ ದಟ್ಟಣೆಯನ್ನು ತಗ್ಗಿಸಿ ಹೆದ್ದಾರಿಯಲ್ಲಿ ಸಂಭವಿಸುವ ಅಪಘಾತದಿಂದಾಗುವ ಸಾವು-ನೋವುಗಳನ್ನು ತಪ್ಪಿಸಲು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜನರು ಒತ್ತಾಯಿಸಿದ್ದಾರೆ.

ನೋಟಿಸ್ ನೀಡಲಾಗುವುದು: ಸುಂಟಿಕೊಪ್ಪದಲ್ಲಿರುವ ಸಭಾಂಗಣದ ಮಾಲೀಕರಿಗೆ ಪಂಚಾಯಿತಿ ವತಿಯಿಂದ ವಿವಾಹ ಸೇರಿದಂತೆ ಇನ್ನಿತರ ಸಮಾರಂಭಗಳಿಗೆ ಸಭಾಂಗಣಗಳನ್ನು ನೀಡುವಾಗ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ತೊಡಕು ಉಂಟಾಗದಂತೆ ಹೆದ್ದಾರಿಯ ಎರಡೂ ಬದಿಯಲ್ಲಿ ವಾಹನಗಳನ್ನು ನಿಲ್ಲಿಸದಂತೆ ಎಚ್ಚರ ವಹಿಸುವಂತೆ ಸೂಕ್ತ ಕ್ರಮವನ್ನು ಕೈಗೊಳ್ಳಲು ಪಂಚಾಯಿತಿ ವತಿಯಿಂದ ನೋಟಿಸ್ ನೀಡಲಾಗುವುದು ಎಂದು ಪಂಚಾಯಿತಿ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net