

ಬೈಲುಕುಪ್ಪೆ(ಪಿರಿಯಾಪಟ್ಟಣ): ಅಪಘಾತಕ್ಕೊಳಗಾಗಿ ಸಾವು-ಬದುಕಿನ ನಡುವೆ ನರಳಾಡುತ್ತ ಬಿದ್ದಿದ್ದ ನಾಯಿಯೊಂದರ ಪ್ರಾಣ ಉಳಿಸಲು ಹೋದವ ಸ್ಥಳದಲ್ಲೇ ದುರಂತ ಅಂತ್ಯಕಂಡ ಹೃದಯವಿದ್ರಾವಕ ಘಟನೆ ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮದಲ್ಲಿ ಸಂಭವಿಸಿದೆ.
ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕು ಗುಬ್ಬಿ ಕೆರಗೋಡು ಗ್ರಾಮದ ಪುಟ್ಟಾಚಾರ್ ಎಂಬುವರ ಪುತ್ರ ಮಹೇಶ್ (40) ಮೃತರು. ಇದನ್ನೂ ಓದಿರಿ ಅಮಾವಾಸ್ಯೆ ದಿನ ಸಂಭವಿಸಿತು ಭೀಕರ ಅಪಘಾತ! ಈ ದೃಶ್ಯ ನೋಡಿದ್ರೆ ಬೆಚ್ಚಿಬೀಳ್ತೀರಿ…
ಸೋಮವಾರ ರಾತ್ರಿ ಪಿರಿಯಾಪಟ್ಟಣ ಕಡೆಯಿಂದ ಕುಶಾಲನಗರ ಕಡೆಗೆ ತೆರಳುತ್ತಿದ್ದ ಅಪರಿಚಿತ ವಾಹನ ಕೊಪ್ಪ ಗ್ರಾಮದ ಬಿ.ಎಂ.ರಸ್ತೆಯ ಪೆಟ್ರೋಲ್ ಬಂಕ್ ಬಳಿ ನಾಯಿಗೆ ಡಿಕ್ಕಿ ಹೊಡೆದುಕೊಂಡು ಹೋಗಿತ್ತು. ತೀವ್ರವಾಗಿ ಗಾಯಗೊಂಡ ನಾಯಿ ರಸ್ತೆಯಲ್ಲೇ ನರಳಾಡುತ್ತ ಬಿದ್ದಿತ್ತು. ನಾಯಿಯ ಚಿಂತಾಜನಕ ಸ್ಥಿತಿಯನ್ನು ನೋಡಿದ ಪೆಟ್ರೋಲ್ ಬಂಕ್ ಕೆಲಸಗಾರ ಮಹೇಶ್, ಅದರ ಬಾಯಿಗೆ ನೀರು ಬಿಡುತ್ತಿದ್ದರು. ಅಷ್ಟರಲ್ಲಿ ಯಮರೂಪಿಯಾಗಿ ಬಂದ ಮತ್ತೊಂದು ಅಪರಿಚಿತ ವಾಹನ ಮಹೇಶ್ಗೆ ಡಿಕ್ಕಿ ಹೊಡೆಯಿತು. ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಮಹೇಶ್ ಸ್ಥಳದಲ್ಲೇ ಅಸುನೀಗಿದರು.
ಬೈಲುಕುಪ್ಪೆ ಠಾಣಾಧಿಕಾರಿ ಜಮೀರ್ ಅಹಮದ್, ಎಎಸ್ಐ ನಂಜುಂಡರಾಜೇ ಅರಸ್, ಸಿಬ್ಬಂದಿ ನಂದೀಶ್ ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.