

ಹುಬ್ಬಳ್ಳಿ : ಈ ವರ್ಷ ಸಂಚಾರದ ನಿಯಮಗಳನ್ನು ಬಿಗಿಗೊಳಿಸಿದ ಕಾರಣ ರಸ್ತೆ ಅಪಘಾತ ಮತ್ತು ಸಾವಿನ ಸಂಖ್ಯೆ ಸಾಕಷ್ಟು ಕಡಿಮೆಯಾಗಿದೆ ಎಂದು ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗದ ಎಡಿಜಿಪಿ ಅಲೋಕ ಕುಮಾರ ಹೇಳಿದರು.
ನವನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಪೊಲೀಸ್ ಅಧಿಕಾರಿಗಳ ಆಂತರಿಕ ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
ಶೇ.60 ರಷ್ಟು ಅಪಘಾತಗಳು ದ್ವಿಚಕ್ರ ವಾಹನಗಳಿಂದಲೇ ಸಂಭವಿಸುತ್ತಿದ್ದು, ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದರು.
ದೇಶದಲ್ಲಿ 2022ರಲ್ಲಿ 1.67 ಲಕ್ಷ ಜನ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಆದರೆ, 2024ರಲ್ಲಿ ರಸ್ತೆ ಸಂಚಾರದ ನಿಯಮಗಳನ್ನು ಬಿಗಿಗೊಳಿಸಿದ ಕಾರಣ ರಾಜ್ಯದಲ್ಲಿ ಅಪಘಾತ ಮತ್ತು ಸಾವಿನ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ತಿಳಿಸಿದರು.
ಪ್ರತಿಯೊಂದನ್ನು ಪೊಲೀಸರೇ ನಿಯಂತ್ರಿಸಲು ಸಾಧ್ಯವಿಲ್ಲ. ಸಾರ್ವಜನಿಕರ ಸಹಕಾರದಿಂದ ಅಪಘಾತ ತಗ್ಗಿಸಲು ಸಾಧ್ಯ. ಜನರು ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲಿಸಬೇಕು. ಹೆಲ್ಮೆಟ್ ಧರಿಸಬೇಕು ಎಂದು ಸಲಹೆ ನೀಡಿದರು.
ವ್ಹೀಲಿಂಗ್ ಮಾಡುವವರಿಂದಲೇ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ. ವಾಹನ ಚಾಲನಾ ಪರವಾನಗಿ ಇಲ್ಲದೇ ರಸ್ತೆಗಿಳಿಯುವುದು, ಚಾಲನೆ ಬಾರದೇ ವಾಹನ ಓಡಿಸುವ ದುಸ್ಸಾಹಸವನ್ನು ಮಾಡಬಾರದು ಎಂದು ಸೂಚಿಸಿದರು.
ಗೂಡ್ಸ್ ವಾಹನ ಹಾಗೂ ಆಟೋಗಳಲ್ಲಿ ನಿಗದಿಗಿಂತ ಹೆಚ್ಚು ಜನರನ್ನು ಕೂಡಿಸಿಕೊಳ್ಳುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅಂತಹ ವಾಹನಗಳನ್ನು ಸೀಜ್ ಮಾಡಿ, ಚಾಲಕರ ಲೈಸೆನ್ಸ್ ರದ್ದುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಮೂಲಕ ಅಪಘಾತಗಳ ಸಂಖ್ಯೆ ತಗ್ಗಿಸುವುದು ನಮ್ಮ ಉದ್ದೇಶ ಎಂದು ಇದೇ ಸಂದರ್ಭದಲ್ಲಿ ಹೇಳಿದರು.
ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಹಾಗೂ ಇತರ ಹಿರಿಯ ಅಧಿಕಾರಿಗಳು ಹಾಜರಿದ್ದರು.