

ಮೈಸೂರು: ಮೈಸೂರು-ತಿ.ನರಸೀಪುರ ಮುಖ್ಯ ರಸ್ತೆಯ ಮೇಗಳಾಪುರ ಬಳಿ ಶನಿವಾರ ಸಂಜೆ ಚಾಲಕನ ನಿಯಂತ್ರಣ ಕಳೆದುಕೊಂಡು ಗೂಡ್ಸ್ ವಾಹನ ಹಳ್ಳಕ್ಕೆ ಉರುಳಿ ಬಿದ್ದು ಯುವಕನೊಬ್ಬ ಮೃತಪಟ್ಟು, 10 ಜನರು ಗಾಯಗೊಂಡಿದ್ದಾರೆ.
ನಗರದ ಬಂಡೀಪಾಳ್ಯ ನಿವಾಸಿ ದರ್ಶನ್(18) ಮೃತ ದುರ್ದೈವಿ. ಬಂಡೀಪಾಳ್ಯ ನಿವಾಸಿಗಳಾದ ಪವನ್, ಸುನೀಲ್, ಸುದೀಪ್, ನಿತಿನ್, ದರ್ಶನ್, ವಿಕಾಸ್(19), ವಿಜಯ್, ರವಿಚಂದ್ರನ್, ಶಶಾಂಕ್, ಹೊಸಹುಂಡಿ ಗ್ರಾಮದ ನಿತಿನ್ ಗಾಯಗೊಂಡಿದ್ದಾರೆ. ಬಂಡೀಪಾಳ್ಯ ನಿವಾಸಿ ಪವನ್ ಹೊಸದಾಗಿ ಗೂಡ್ಸ್ ವಾಹನ ಖರೀದಿಸಿದ್ದರು. ಈ ಹಿನ್ನೆಲೆಯಲ್ಲಿ ವಾಹನದಲ್ಲಿ ಮಹದೇಶ್ವರ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸುವ ಸಲುವಾಗಿ ತೆರಳುತ್ತಿದ್ದ ಸಂದರ್ಭ ಅಪಘಾತ ಸಂಭವಿಸಿದೆ. ಮೇಗಳಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಸಕರ ಭೇಟಿ: ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿರುವ ಯುವಕರನ್ನು ಶಾಸಕ ಜಿ.ಟಿ.ದೇವೇಗೌಡ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಶಾಸಕ ಜಿ.ಡಿ.ಹರೀಶ್ ಗೌಡ, ಮಾಜಿ ಸಚಿವ ಸಾ.ರಾ.ಮಹೇಶ್, ಮಾಜಿ ಶಾಸಕರಾದ ಕೆ.ಮಹದೇವು, ಅಶ್ವಿನ್ ಕುಮಾರ್ ಹಾಗೂ ಇತರರು ಇದ್ದರು.