

ಮಂಡ್ಯ: 'ಅತಿ ವೇಗ, ತಿಥಿ ಬೇಗ' ಎಂಬುವುದು ಈ ಬೈಕ್ ಸವಾರರ ಪಾಲಿಗೆ ನಿಜವಾಗಿದೆ. ತುಂಬಾ ವೇಗವಾಗಿ ಚಲಾಯಿಸುತ್ತಿದ್ದ ಎರಡು ಬೈಕ್ಗಳು ಮುಖಾಮುಖಿ ಡಿಕ್ಕಿಯಾಗಿ, ಇಬ್ಬರು ಸವಾರರು ಸ್ಥಳದಲ್ಲೇ ಸಾವಿಗೀಡಾಗಿದ್ದರೆ, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಸಾಸಲು ಗ್ರಾಮದ ಮಧು (20) ಮತ್ತು ಹಾಲದಹಳ್ಳಿಯ ದರ್ಶನ್ (21) ಮೃತಪಟ್ಟ ಬೈಕ್ ಸವಾರರು. ಸಾಸಲು ಬಳಿಯೇ ಈ ಅಪಘಾತ ಸಂಭವಿಸಿದೆ. ಎರಡೂ ಬೈಕ್ಗಳು ಅತಿವೇಗದಿಂದ ಹೋಗುತ್ತಿದ್ದು, ಆಯತಪ್ಪಿ ಮುಖಾಮುಖಿ ಡಿಕ್ಕಿಯಾಗಿವೆ.
ಅಪಘಾತದ ತೀವ್ರತೆಗೆ ಎರಡೂ ಬೈಕ್ಗಳ ಮುಂಬದಿ ಸವಾರರಿಬ್ಬರೂ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಹಿಂಬದಿಯಲ್ಲಿ ಕೂತವರು ಪ್ರಾಣಾಪಾಯದಿಂದ ಪಾರಾಗಿದ್ದರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಿಕ್ಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ.