ರಿಕ್ಷಾ, ಜೀಪು ನಡುವೆ ಅಪಘಾತ: ಕೂಲಿಕಾರ್ಮಿಕ ಮೃತ್ಯು

Accident
Published on

ಈಶ್ವರಮಂಗಲ: ಕೆಯ್ಯೂರು ಗ್ರಾಮದ ಪೊಯ್ಯೋಲೆ ಎಂಬಲ್ಲಿ ಕೂಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಆಟೋ ಮತ್ತು ಜೀಪು ನಡುವೆ ಶನಿವಾರ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಓರ್ವ ಮೃತಪಟ್ಟು ಇತರ ನಾಲ್ವರು ಗಾಯಗೊಂಡಿದ್ದಾರೆ.

ಕೆಯ್ಯೂರು ದೇರ್ಲ ನಿವಾಸಿ ಚೋಮ ಎಂಬುವರ ಪುತ್ರ ಪ್ರವೀಣ್(32) ಮೃತಪಟ್ಟವರು. ದೇರ್ಲ ನಿವಾಸಿ ಲಕ್ಷ್ಮಣ ಬಾಕುಡ ಅವರ ಪುತ್ರ ಗುರುಪ್ರಸಾದ್, ದೇರ್ಲ ನಿವಾಸಿಗಳಾದ ಲಕ್ಷ್ಮೀ, ಲೀಲಾವತಿ ಹಾಗೂ ಅವರ ಪುತ್ರ ಹರ್ಷಿತ್ ಗಾಯಗೊಂಡವರು.

ನೆಟ್ಟಾಳದಿಂದ ಮಾಡಾವಿನ ಶರತ್‌ಕುಮಾರ್ ಎಂಬುವರ ಮನೆಗೆ ಕೂಲಿ ಕೆಲಸಕ್ಕೆಂದು ಐವರು ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಆಟೋಮತ್ತು ಮಾಡಾವಿನಿಂದ ನೆಟ್ಟಾಳಕ್ಕೆ ಶೇಂದಿ ಕೊಂಡೊಯ್ಯಲು ತೆರಳುತ್ತಿದ್ದ ಕಣಿಯೂರಿನ ಚಂದ್ರಶೇಖರ್ ಪೂಜಾರಿ ಎಂಬುವರು ಚಲಾಯಿಸುತ್ತಿದ್ದ ಜೀಪು ಪೊಯ್ಯಲೆ ಬಳಿ ಪರಸ್ಪರ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಆಟೋ ರಿಕ್ಷಾ ನಜ್ಜುಗುಜ್ಜಾಗಿದ್ದು, ಅದರಲ್ಲಿ ಪ್ರಯಾಣಿಸುತ್ತಿದ್ದ ಐವರು ಗಾಯಗೊಂಡಿದ್ದರು. ಗಾಯಾಳುಗಳನ್ನು ತಕ್ಷಣ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆಯೊಯ್ಯಲಾಯಿತು. ಪ್ರವೀಣ್ ಮತ್ತು ಗುರುಪ್ರಸಾದ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಪ್ರವೀಣ್ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಗಂಭೀರ ಗಾಯಗೊಂಡಿರುವ ಗುರುಪ್ರಸಾದ್ ಮಂಗಳೂರಿನ ಖಾಸಗಿ ಆಸ್ಪತ್ರೆ ಹಾಗೂ ಉಳಿದವರು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಟೋ ಚಾಲಕ ಎಟ್ಯಡ್ಕದ ಗಿರಿಧರ್ ಅಪಾಯದಿಂದ ಪಾರಾಗಿದ್ದಾರೆ. ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net