

ಸಿಂಧನೂರು: ನಗರದ ಬಸ್ ನಿಲ್ದಾಣ ಹತ್ತಿರ ವೇಗ ನಿಯಂತ್ರಕಗಳನ್ನು ಹಾಕಬೇಕೆಂದು ಒತ್ತಾಯಿಸಿ ತಹಸಿಲ್ ಕಚೇರಿ ಶಿರಸ್ತೇದಾರ್ ಅಂಬಾದಾಸ್‌ಗೆ ಪ್ರಜ್ಞಾವಂತ ನಾಗರಿಕರ ವೇದಿಕೆಯಿಂದ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಬಸ್ ನಿಲ್ದಾಣದ ಮುಂದಿನ ರಾಜ್ಯ ಹೆದ್ದಾರಿಯಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಜನಸಂದಣಿಯೂ ಹೆಚ್ಚಿರುತ್ತದೆ. ಬಸ್ ನಿಲ್ದಾಣ ಕಡೆಯಿಂದ ಎದುರಿಗಿರುವ ಆಸ್ಪತ್ರೆಗಳಿಗೆ ಜನರು ಹೋಗುತ್ತಾರೆ. ಅಪಘಾತಗಳನ್ನು ತಪ್ಪಿಸುವ ಉದ್ದೇಶದಿಂದ ಯಾವುದೇ ಮುಂಜಾಗ್ರತಾ ಕ್ರಮಕೈಗೊಂಡಿಲ್ಲ.
ಈ ಹಿನ್ನೆಲೆಯಲ್ಲಿ ಬಸ್ ನಿಲ್ದಾಣದ ಪ್ರವೇಶ ಮತ್ತು ನಿರ್ಗಮನ ದ್ವಾರದ ಮುಂದಿನ ರಸ್ತೆಯ ಎರಡು ಬದಿಯಲ್ಲಿ ಹಂಪ್ಸ್ ನಿರ್ಮಾಣ ಮಾಡಬೇಕು. ಪಾದಚಾರಿಗಳು ರಸ್ತೆ ದಾಟಲು ಅನುಕೂಲವಾಗುವಂತೆ ಕ್ರಾಸಿಂಗ್ ಪಟ್ಟಿ ಹಾಕಬೇಕು. ರಸ್ತೆಯಲ್ಲಿ ಜೀಪ್, ಕಾರು, ಬೈಕ್ ಪಾರ್ಕ್ ಮಾಡುವುದನ್ನು ನಿಷೇಧಿಸಬೇಕು. ಬಸ್ ನಿಲ್ದಾಣ ಮುಂಭಾಗದಲ್ಲಿ ಎರಡೂ ಬದಿ ತಲಾ ಒಂದು ಮಳಿಗೆ ತೆರವುಗೊಳಿಸಬೇಕು ಎಂದು ಒತ್ತಾಯಿಸಲಾಯಿತು.