

ಮಳವಳ್ಳಿ: ಪಟ್ಟಣದಲ್ಲಿ ಟೊಮ್ಯಾಟೊ ತುಂಬಿಕೊಂಡು ಹೋಗುತ್ತಿದ್ದ ಗೂಡ್ಸ್ ವಾಹನ ಸೋಮವಾರ ಡಿಕ್ಕಿ ಹೊಡೆದು ಪರಿಣಾಮ ಬೈಸಿಕಲ್ ಸವಾರ ತೀವ್ರವಾಗಿ ಗಾಯಗೊಂಡಿದ್ದಾರೆ.
ಪಟ್ಟಣದ ಗಂಗಾಮತ ಬಡಾವಣೆ ನಿವಾಸಿ ವೆಂಕಟೇಶ್ ಗಾಯಾಳು. ಇವರು ಬೈಸಿಕಲ್‌ಗೆ ಸೌದೆ ಕಟ್ಟಿಕೊಂಡು ಕನಕಪುರ ಮುಖ್ಯ ರಸ್ತೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುತ್ತಿದ್ದಾಗ ಬೆಂಗಳೂರು ಕಡೆಗೆ ಟೊಮ್ಯಾಟೋ ತುಂಬಿಸಿಕೊಂಡು ಹೋಗುತ್ತಿದ್ದ ಗೂಡ್ಸ್ ವಾಹನ ಹಿಂಬದಿಯಿದ ಡಿಕ್ಕಿ ಹೊಡೆದಿದೆ. ಇದರಿಂದ ಬೈಸಿಕಲ್ ಸವಾರ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾನೆ. ನಂತರ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಗೂಡ್ಸ್ ವಾಹನ ಉರುಳಿ ಬಿದ್ದು ಟೊಮ್ಯಾಟೊ ತುಂಬಿದ್ದ ಕ್ರೇಟ್‌ಗಳು ರಸ್ತೆಗೆ ಉರುಳಿ ಬಿದ್ದಿದ್ದು, ರಸ್ತೆ ತುಂಬೆಲ್ಲ ಟೊಮ್ಯಾಟೊ ಚೆಲ್ಲಾಪಿಲ್ಲಿಯಾಗಿವೆ. ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿವೆ. ತೀವ್ರವಾಗಿ ಗಾಯಗೊಂಡಿದ್ದ ಬೈಸಿಕಲ್ ಸವಾರನನ್ನು ಸ್ಥಳೀಯರು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.