

ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ರ ಗೊಟ್ಟಿಪುರ ಗೇಟ್ ಬಳಿ ಶುಕ್ರವಾರ ಮುಂಜಾನೆ 4 ಗಂಟೆ ವೇಳೆ ಲಾರಿ ಹಾಗೂ ಆಂಧ್ರ ಸಾರಿಗೆ ಬಸ್ ನಡುವಿನ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿ ನಾಲ್ವರು ಮೃತಪಟ್ಟಿದ್ದಾರೆ.
ಆಂದ್ರ ಮೂಲದ ಕೇಶವ್ ರೆಡ್ಡಿ(44), ತುಳಸಿ (21), ಪ್ರಣತಿ (4) ಹಾಗೂ 1 ವರ್ಷದ ಮಗು ಮೃತ ದುರ್ದೈವಿಗಳು. ಅಪಘಾತದ ತೀವ್ರತೆಗೆ ಬಸ್‌ನ ಅರ್ಧಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.16 ಕ್ಕೂ ಹೆಚ್ಚು ಪ್ರಯಾಣಿಕರಿಗೆ ತೀವ್ರ ಗಾಯಗಳಾಗಿದ್ದು ಗಾಯಾಳುಗಳನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಆಂದ್ರದಿಂದ ವಲಸೆ ಬಂದು ಬೆಂಗಳೂರಿನ ಜೆಪಿ ನಗರದಲ್ಲಿ ವಾಸವಿದ್ದು ಕೂಲಿ ಕೆಲಸ ಮಾಡುತ್ತಿದ್ದ ಕೇಶವ್ ಆಂದ್ರದಿಂದ ಬೆಂಗಳೂರಿಗೆ ವಾಪಸ್ ಆಗುತ್ತಿದ್ದರು ಎನ್ನಲಾಗಿದೆ. ಹಾಗೆಯೇ ಬೆಂಗಳೂರಿನಲ್ಲಿ ಬಿಟೆಕ್ ವ್ಯಾಸಂಗ ಮಾಡುತ್ತಿದ್ದ ತುಳಸಿ ಎಂಬುವರು ಸ್ವಗ್ರಾಮಕ್ಕೆ ತೆರಳಿ ವಾಪಸ್ ಬೆಂಗಳೂರಿಗೆ ಬರುತ್ತಿದ್ದರು ಎನ್ನಲಾಗಿದೆ, ಅಪಘಾತದ ತೀವ್ರತೆಗೆ ರಕ್ತಸ್ರಾವವಾಗಿ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
30 ಪ್ರಯಾಣಿಕರು: ಅಪಘಾತವಾದ ಬಸ್‌ನಲ್ಲಿ 30ಕ್ಕೂ ಹೆಚ್ಚು ಪ್ರಯಾಣಿಕರಿದ್ದರು, ಇದರಲ್ಲಿ ಕೆಲವರು ತಿರುಪತಿ ದೇವಸ್ಥಾನಕ್ಕೆ ತೆರಳಿ ವಾಪಸ್ ಬರುತ್ತಿದ್ದರು. ಇನ್ನು ಕೆಲವರು ಆಂದ್ರದ ಚಿತ್ತೂರಿನಿಂದ ಬೆಂಗಳೂರು ಕಡೆಗೆ ಮರಳುತ್ತಿದ್ದರು ಎಲ್ಲರು ನಿದ್ರೆಯ ಮಂಪರಿನಲ್ಲಿದ್ದಾಗ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಮೃತ ದೇಹಗಳ ಹಸ್ತಾಂತರ: ಅಪಘಾತದ ನಡೆದ ಸ್ಥಳಕ್ಕಾಗಮಿಸಿದ ಗ್ರಾಮಾಂತರ ಜಿಲ್ಲಾ ಎಸ್‌ಪಿ ಸಿಕೆ ಬಾಬಾ ಸ್ಥಳ ಪರಿಶೀಲನೆ ನಡೆಸಿದರು. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆ ನಂತರ ಕುಟುಂಬದವರಿಗೆ ಹಸ್ತಾಂತರಿಸುವಂತೆ ಸಿಬ್ಬಂದಿಗೆ ಸೂಚನೆ ನೀಡಿದರು. ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ದೊರೆಕಿಸಿಕೊಡುವಂತೆ ಸೂಚಿಸಿದರು. ಅಪಘಾತದಿಂದ ರಸ್ತೆಯಲ್ಲಿ ವಾಹನ ದಟ್ಟಣೆ ಏರ್ಪಟ್ಟಿತ್ತು. ಸಂಚಾರ ಪೊಲೀಸರು ಅಪಘಾತಕ್ಕೀಡಾದ ಲಾರಿ ಹಾಗೂ ಬಸ್‌ನ್ನು ತೆರವುಗೊಳಿಸಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ನಿದ್ರೆ ಮಂಪರಿನಲ್ಲಿ ಡಿಕ್ಕಿ:
ತಿರುಪತಿ ಕಡೆಯಿಂದ ಬೆಂಗಳೂರಿನ ಕಡೆಗೆ ಮರಳುತ್ತಿದ್ದ ಆಂಧ್ರ ಸಾರಿಗೆ ಬಸ್ ಚಾಲಕ ನಿದ್ರೆ ಮಂಪರಿನಲ್ಲಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಮುಂದೆ ಸಾಗುತ್ತಿದ್ದ ಲಾರಿಯನ್ನು ಓವರ್‌ಟೇಕ್ ಮಾಡುವ ವೇಳೆ ಡಿಕ್ಕಿಯೊಡೆದಿದ್ದಾನೆ. ಡಿಕ್ಕಿ ರಭಸಕ್ಕೆ ಬಸ್‌ನ ಮುಂಭಾಗ ಸೇರಿ ಸುಮಾರು ಅರ್ಧ ಭಾಗ ನಜ್ಜುಗುಜ್ಜಾಗಿದೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರು ಬಸ್ ಹಾಗೂ ಲಾರಿ ಚಾಲಕನ ವಿಚಾರಣೆ ನಡೆಸುತ್ತಿದ್ದಾರೆ.
ಕೋಟ್: ಶುಕ್ರವಾರ ಮುಂಜಾನೆ 4 ಗಂಟೆ ಸಮಯದಲ್ಲಿ ಅಪಘಾತ ಸಂಭವಿಸಿದ್ದು, ಸ್ಥಳಕ್ಕೆ ಹೊಸಕೋಟೆ ಸಂಚಾರ ಠಾಣೆ ಪೊಲೀಸರೊಂದಿಗೆ ಭೇಟಿ ನೀಡಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸುವ ಕೆಲಸ ಮಾಡಲಾಗಿದೆ, ಅಪಘಾತ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ. ಆಂದ್ರ ಪ್ರದೇಶದ ಸಾರಿಗೆ ಬಸ್ ಹಾಗೂ ಲಾರಿಯನ್ನು ವಶಕ್ಕೆ ಪಡೆಯಲಾಗಿದ್ದು ಚಾಲಕರ ವಿಚಾರಣೆ ನಡೆಸಲಾಗುತ್ತಿದೆ.
ಮಲ್ಲೇಶ್, ಡಿವೈಎಸ್‌ಪಿ, ಹೊಸಕೋಟೆ ಉಪವಿಭಾಗ.