

ಗುಂಡ್ಯ/ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯ ತಿರುವಿನಲ್ಲಿ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದ್ದು, ಬಸ್ ಚಾಲಕ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ. ಬಸ್ ರಸ್ತೆಗೆ ಅಡ್ಡಲಾಗಿ ನಿಂತ ಕಾರಣ ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿದೆ.
ಬಸ್ ಚಾಲಕ ಧರ್ಮಸ್ಥಳ ಬೆಳಾಲು ನಿವಾಸಿ ಶ್ರೀನಿವಾಸ, ಪ್ರಯಾಣಿಕರಾದ ನೆಲಮಂಗಲ ನಿವಾಸಿ ಸಿದ್ದಲಿಂಗಪ್ಪ, ಉಜಿರೆ ಕಾಶಿಬೆಟ್ಟು ನಿವಾಸಿ ಪ್ರಣಯ್, ಕನಕಪುರ ನಿವಾಸಿ ಮಂಜುನಾಥ ಗಾಯಗೊಂಡಿದ್ದಾರೆ. ಆಂಬುಲೆನ್ಸ್ ಮೂಲಕ ನೆಲ್ಯಾಡಿ ಆಸ್ಪತ್ರೆಗೆ ವರ್ಗಾವಣೆ ಮಾಡಲಾಗಿದೆ. ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಸಾಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಗುಂಡ್ಯ ಪೇಟೆಯಿಂದ ಸುಮಾರು ೧೦೦ ಮೀ. ದೂರದ ಅಪಾಯಕಾರಿ ತಿರುವಿನಲ್ಲಿ ಲಾರಿಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಬಸ್ಸಿನ ಹಾಗೂ ಲಾರಿಯ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.