

ಅವಿನಾಶ್ ಜೈನಹಳ್ಳಿ ಮೈಸೂರು
ಎಲ್ಲೆಡೆ ಸುಗ್ಗಿ ಕಾಲದ ಸಂಭ್ರಮ ಮನೆ ಮಾಡಿದ್ದು, ರೈತರು ಬೆಳೆದ ಬೆಳೆಯನ್ನು ಮನೆಗೆ ಕೊಂಡೊಯ್ಯುವ ಸುಸಮಯ. ಆದರೆ, ಬೆಳೆ ಮತ್ತು ಹುಲ್ಲನ್ನು ಬೇರ್ಪಡಿಸುವ ಸಲುವಾಗಿ ರೈತರು ಮಾಡುವ ಒಕ್ಕಣೆ ಕಾರ್ಯ ವಾಹನಗಳ ಸಂಚಾರಕ್ಕೆ ತೊಡಕಾಗಿರುವುದಲ್ಲದೆ, ಜನರ ಜೀವಕ್ಕೆ ಸಂಚಕಾರವಾಗಿದೆ.
ಈಗಾಗಲೇ ಜಿಲ್ಲೆಯ ಎಲ್ಲೆಡೆ ಭತ್ತ, ರಾಗಿ, ಹುರುಳಿ ಕಟಾವು ಕಾರ್ಯ ಮುಗಿದಿದ್ದು, ಒಕ್ಕಣೆ ಕಾರ್ಯ ಭರದಿಂದ ಸಾಗಿದೆ. ಈ ನಡುವೆ ಭತ್ತ, ರಾಗಿ, ಹುರುಳಿ, ಅಲಸಂದೆಯಂತಹ ದವಸ-ಧಾನ್ಯಗಳ ಒಕ್ಕಣೆಯನ್ನು ರಸ್ತೆಯಲ್ಲೇ ಮಾಡುತ್ತಿರುವವರ ಪ್ರಮಾಣ ಹೆಚ್ಚಾಗಿದ್ದು, ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ.
ಇತ್ತೀಚೆಗೆ ಹೆರಿಗೆಗಾಗಿ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ 108 ತುರ್ತು ವಾಹನಕ್ಕೆ ನಂಜನಗೂಡು ತಾಲೂಕಿನ ಹುಣಸನಾಳು ಸಮೀಪ ರಸ್ತೆಯಲ್ಲಿ ಹರಡಿದ್ದ ಹುರುಳಿ ಸತ್ತೆ ಸುತ್ತಿಕೊಂಡಿತ್ತು. ಆದರೆ, ಅದೃಷ್ಟವಶಾತ್ ಯಾವುದೇ ಅಪಾಯ ಆಗಲಿಲ್ಲ.
ಮತ್ತೊಂದು ಪ್ರಕರಣದಲ್ಲಿ ತರದಲೆ ಮೂಲದ ಮಹಿಳೆಯನ್ನು ಹೆರಿಗೆಗೆಂದು ನಂಜನಗೂಡಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಆಂಬುಲೆನ್ಸ್ ಚಕ್ರಕ್ಕೆೆ ಹುರುಳಿ ಸತ್ತೆ ಸುತ್ತಿಕೊಂಡಿತ್ತು. ಆ ವೇಳೆ ಮಲ್ಲಹಳ್ಳಿ ಗ್ರಾಮದತ್ತ ತೆರಳುತ್ತಿದ್ದ ರೈತಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಮ್ಮಾವು ರಘು, ತಾಲೂಕು ಅಧ್ಯಕ್ಷ ಸಿಂಧುವಳ್ಳಿ ಸತೀಶ್‌ರಾವ್ ಸೇರಿದಂತೆ ರೈತ ಮುಖಂಡರು ಹುಲ್ಲು ತೆಗೆಯಲು ನೆರವಾಗಿದ್ದರು. ಇದರಿಂದಾಗಿ ಅರ್ಧ ಗಂಟೆ ಕಾಲ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲು ತಡವಾಗಿತ್ತು. ಇಂತಹ ಅನೇಕ ಉದಾಹರಣೆಗಳು ನಮ್ಮ ಕಣ್ಮುಂದೆ ಇವೆ.
ಗ್ರಾಮೀಣ ಭಾಗದ ಬಹುತೇಕ ರಸ್ತೆಗಳಲ್ಲಿ ಒಕ್ಕಣೆ ಕಾರ್ಯ ನಡೆಯುತ್ತಿದ್ದು, ಬಸ್, ಕಾರು, ಆಟೋ ರಿಕ್ಷಾ ಸೇರಿದಂತೆ ದ್ವಿಚಕ್ರ ವಾಹನಗಳು ಸುಗಮವಾಗಿ ರಸ್ತೆಯಲ್ಲಿ ಸಾಗಲು ಕಷ್ಟವಾಗಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಜೀವಕ್ಕೆ ಅಪಾಯ ಎದುರಾಗುವ ಸಾಧ್ಯತೆ ಇದೆ. ಈಗಾಗಲೇ ಜಿಲ್ಲೆಯ ಹಲವೆಡೆ ಒಕ್ಕಣೆಯ ಹುಲ್ಲಿಗೆ ಸಿಲುಕಿ ವಾಹನಗಳು ಮಗುಚಿಬಿದ್ದ ಪ್ರಕರಣ, ಕಾರಿನ ಸೈಲೆನ್ಸರ್‌ಗೆ ಹುರುಳಿ ಸತ್ತೆ ಸಿಕ್ಕಿ ಬೆಂಕಿ ಹೊತ್ತಿಕೊಂಡು ಉರಿದ ಘಟನೆ ಸಂಭವಿಸಿದ್ದು, ಹೆಚ್ಚಿನ ಹಾನಿಯಾಗವ ಮುನ್ನವೇ ಪೊಲೀಸರು ಮತ್ತು ಸ್ಥಳೀಯ ಆಡಳಿತ ಎಚ್ಚೆತ್ತುಕೊಂಡು ರೈತರು ರಸ್ತೆಯಲ್ಲಿ ಒಕ್ಕಣೆ ಮಾಡದಂತೆ ಕ್ರಮವಹಿಸಬೇಕು ಎಂಬುದು ವಾಹನ ಚಾಲಕರ ಆಗ್ರಹವಾಗಿದೆ.
ಅಪಘಾತಕ್ಕೆ ಆಹ್ವಾನ: ಜಿಲ್ಲೆಯ ಪ್ರಮುಖ ರಸ್ತೆ ಸೇರಿದಂತೆ ಗ್ರಾಮೀಣ ಭಾಗದ ರಸ್ತೆಗಳಲ್ಲಿ ಒಕ್ಕಣೆ ಮಾಡುತ್ತಿರುವುದರಿಂದ ಭಾರಿ ವಾಹನಗಳೂ ಸೇರಿದಂತೆ ಆಟೋ, ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವ ಪ್ರಯಾಣಿಕರು ಅಪಘಾತಕ್ಕೆ ಒಳಗಾಗುತ್ತಿರುವ ಸಾಕಷ್ಟು ಉದಾಹರಣೆಗಳಿವೆ. ರಾಗಿ ಮತ್ತು ಭತ್ತದ ಹುಲ್ಲಿನ ಮೇಲೆ ವಾಹನಗಳು ಚಲಿಸುವಾಗ ಚಕ್ರಕ್ಕೆ ಬಿಗಿಯಾದ ಹಿಡಿತ ಸಿಗದೆ ಸ್ಕಿಡ್ ಆಗಿ ಮಗುಚಿ ಬೀಳುವ ಸಾಧ್ಯತೆ ಇದ್ದರೆ, ಮತ್ತೊಂದೆಡೆ ವಾಹನಗಳ ಎಂಜಿನ್ ಮತ್ತು ಹೊಗೆಯ ಪೈಪ್ ಸಂಪೂರ್ಣವಾಗಿ ಕಾದಿರುವುದರಿಂದ ಅದಕ್ಕೆ ಹುಲ್ಲು ಅಥವಾ ಹುರುಳಿ, ಅಲಸಂದೆ ಸತ್ತೆ ತಾಗಿ ಬೆಂಕಿ ಹೊತ್ತಿಕೊಳ್ಳುವ ಅಪಾಯವೂ ಇದೆ.
ಬಹುಪಾಲು ರೈತರು ಸ್ವಂತ ಜಮೀನುಗಳಲ್ಲಿ ಒಕ್ಕಣೆಗೆ ಕಣ ಮಾಡುವುದನ್ನೇ ಮರೆತಿದ್ದು, ಕೂಲಿ ಕಾರ್ಮಿಕರ ಅಗತ್ಯತೆ ಕಡಿಮೆ ಹಿನ್ನೆಲೆಯಲ್ಲಿ ಡಾಂಬರ್ ರಸ್ತೆಗಳನ್ನೇ ಅವಲಂಬಿಸಿದ್ದಾರೆ. ಇದು ವಾಹನ ಸವಾರರು/ಚಾಲಕರಿಗೆ ನುಂಗಲಾರದ ತುತ್ತಾಗಿದ್ದು, ಪ್ರಶ್ನಿಸಲು ಮುಂದಾಗುವವರಿಗೆ ಬೆದರಿಕೆಯೊಡ್ಡುವ ಪ್ರಸಂಗವೂ ನಡೆಯುತ್ತದೆ.
ಪ್ರವಾಸಿಗರಿಗೂ ತೊಡಕು: ಪ್ರಮುಖ ಪ್ರವಾಸಿ ಕೇಂದ್ರಗಳನ್ನು ಹೊಂದಿರುವ ಮೈಸೂರು ಜಿಲ್ಲೆಗೆ ಲಕ್ಷಾಂತರ ಮಂದಿ ಪ್ರವಾಸಿಗರು ಭೇಟಿ ನೀಡುವುದು ಸಾಮಾನ್ಯ. ಪ್ರವಾಸಿಗರು ಪ್ರವಾಸಿ ತಾಣಗಳಿಗೆ ತೆರಳುವ ಸಂದರ್ಭ ರೈತರು ಮಾಡುವ ಒಕ್ಕಣೆ ಕಿರಿಕಿರಿ ಉಂಟುಮಾಡುತ್ತಿರುವುದಲ್ಲದೆ, ಜೀವಕ್ಕೂ ಅಪಾಯ ತಂದೊಡ್ಡಿದೆ.
ಸೌಲಭ್ಯ ಬಳಸಿಕೊಳ್ಳುತ್ತಿಲ್ಲ: ಕೃಷಿ ಇಲಾಖೆ ಒಕ್ಕಣೆಗೆ ಅನುಕೂಲವಾಗುವಂತೆ ಕಣ ನಿರ್ಮಾಣಕ್ಕೆ ರೈತರಿಗೆ ಸಹಾಯಧನ ನೀಡುವುದಲ್ಲದೆ, ಒಕ್ಕಣೆ ಯಂತ್ರ, ಟಾರ್ಪಾಲ್ ಸೇರಿದಂತೆ ವಿವಿಧ ಪರಿಕರಗಳನ್ನು ರಿಯಾಯಿತಿ ದರದಲ್ಲಿ ನೀಡಲಿದೆ. ಆದರೆ, ಯಾರೂ ಸದ್ಬಳಕೆಗೆ ಮುಂದಾಗುತ್ತಿಲ್ಲ ಎಂಬುದು ಕೃಷಿ ಇಲಾಖೆ ಅಧಿಕಾರಿಗಳ ಅಭಿಪ್ರಾಯ.
ಪೊಲೀಸರ ಅಸಹಾಯಕತೆ: ರಸ್ತೆಗಳಲ್ಲಿ ಒಕ್ಕಣೆ ಮಾಡುವುದರಿಂದ ಒಂದಲ್ಲ ಒಂದು ಅಪಘಾತಗಳು ಸಂಭವಿಸುತ್ತಿವೆ. ಇದು ಪೊಲೀಸರಿಗೆ ದೊಡ್ಡ ತಲೆ ನೋವಾಗಿದೆ. ಯಾರ ವಿರುದ್ಧ ದೂರು ದಾಖಲಿಸುವುದು ಎಂಬುದೇ ದೊಡ್ಡ ಚಿಂತೆ. ರಸ್ತೆಯಲ್ಲಿ ಒಕ್ಕಣೆ ಬೇಡ. ಇದರಿಂದ ಹೆಚ್ಚು ಅಪಘಾತ ನಡೆಯುತ್ತವೆ ಎಂದು ಪೊಲೀಸರು ಎಷ್ಟೇ ಮನವಿ ಮಾಡಿದರೂ ಯಾರೂ ಕಿವಿಗೊತ್ತಿಲ್ಲ ಎಂಬುದು ಪೊಲೀಸರ ಮಾತು.
ರಸ್ತೆಯಲ್ಲಿ ರೈತರು ಭತ್ತ, ರಾಗಿ ಒಕ್ಕಣೆ ಮಾಡುವುದರಿಂದ ಸುಲಲಿತವಾಗಿ ವಾಹನ ಚಲಾಯಿಸಲು ಸಾಧ್ಯವಾಗುವುದಿಲ್ಲ. ವಾಹನಗಳ ಎಂಜಿನ್ ಹೆಚ್ಚು ಬಿಸಿಯಾಗಿರುವುದರಿಂದ ಬೆಂಕಿ ಹೊತ್ತಿಕೊಳ್ಳುವ ಅಪಾಯವಿದೆ. ಜತೆಗೆ ಸ್ಕಿಡ್ ಆಗಿ ಪಲ್ಟಿಯಾಗಿ ಜೀವಕ್ಕೂ ಹಾನಿಯಾಗುವ ಸಾಧ್ಯತೆಗಳಿವೆ.
ಅರವಿಂದ್ ಟ್ಯಾಕ್ಸಿ ಚಾಲಕ ಮೈಸೂರು
ಜಮೀನನಲ್ಲಿ ಕಣ ನಿರ್ಮಾಣಕ್ಕೆ ಹೆಚ್ಚು ಸಮಯ ಮತ್ತು ಕಾರ್ಮಿಕರ ಅಗತ್ಯವಿದೆ. ಇದರಿಂದ ಹಣವೂ ಪೋಲು. ವಾಹನಗಳು ಹೆಚ್ಚು ಓಡಾಡದ ರಸ್ತೆಯಲ್ಲಿ ಒಕ್ಕಣೆ ಮಾಡುವುದರಿಂದ ವೆಚ್ಚ ಕಡಿಮೆಯಾಗುವ ಜತೆಗೆ ಕೆಲಸವೂ ಬೇಗ ಮುಗಿಯಲಿದೆ. ಯಾವುದೇ ಅವಘಡ ಸಂಭವಿಸದಂತೆ ನಾವು ಎಚ್ಚರ ವಹಿಸುತ್ತೇವೆ.
ಕೃಷ್ಣೇಗೌಡ ರೈತ ಕೆ.ಆರ್.ನಗರ
ರಸ್ತೆಯಲ್ಲಿ ಒಕ್ಕಣೆ ಮಾಡದಂತೆ ರೈತರಿಗೆ ತಿಳಿವಳಿಕೆ ಹೆಳುತ್ತಿದ್ದೇವೆ. ಜತೆಗೆ ಬೀಟ್ ಪೊಲೀಸರ ವ್ಯಾಪ್ತಿಯಲ್ಲಿ ಇಂತಹ ಪ್ರಕರಣ ಕಂಡುಬಂದರೆ ಅವರ ವಿರುದ್ಧ ಪ್ರಕರಣ ದಾಖಲಿಸಿ ದಂಡವನ್ನೂ ಹಾಕಲಾಗುತ್ತಿದೆ. ಆದರೂ ಹಲವರು ಮಾಹಿತಿ ಕೊರತೆಯಿಂದ ರಸ್ತೆಯಲ್ಲಿ ಒಕ್ಕಣೆ ಮಾಡುತ್ತಿದ್ದಾರೆ. ಈ ಬಗ್ಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಜಾಗೃತಿ ಮೂಡಿಸಲಾಗುವುದು.