ಬೈಕ್ ವೀಲಿಂಗ್‌ಗೆ ಇಬ್ಬರು ಬಲಿ

accident
Published on

ವಿಜಯವಾಣಿ ಸುದ್ದಿಜಾಲ ವಿಜಯಪುರ

ಪಟ್ಟಣದ ಬೈಪಾಸ್ ರಸ್ತೆಯಲ್ಲಿ ಶುಕ್ರವಾರ ಬೈಕ್ ವೀಲಿಂಗ್ ಮಾಡಲು ಹೋದ ಯುವಕರಿಬ್ಬರು ಎದುರಿಗೆ ಬಂದ ಕ್ಯಾಂಟರ್ ಡಿಕ್ಕಿ ಹೊಡೆದುಕೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಪಟ್ಟಣದ ನಿವಾಸಿಗಳಾದ ಮನೋಜ್ (19) ಮತ್ತು ಹರ್ಬಾಜ್ (19) ಮೃತರು.

ಬೈಪಾಸ್ ರಸ್ತೆಯಲ್ಲಿ ಬೆಳಗ್ಗೆ ಮಳೆ ನಡುವೆಯೂ ಡೆಡ್ಲಿ ಬೈಕ್ ವೀಲಿಂಗ್ ಮಾಡಿಕೊಂಡು ಹೋಗುತ್ತಿದ್ದಾಗ ಕ್ಯಾಂಟರ್‌ಗೆ ಡಿಕ್ಕಿ ಹೊಡೆದುಕೊಂಡಿದ್ದು, ಇಬ್ಬರೂ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ. ಅಪಘಾತ ತಪ್ಪಿಸಲು ಪ್ರಯತ್ನಿಸಿದ ಚಾಲಕ ತಕ್ಷಣ ರಸ್ತೆ ಬದಿಗೆ ಕ್ಯಾಂಟರ್ ಎಳೆದಿದ್ದು, ಅದೃಷ್ಟವಷಾತ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆಯದೇ ತಪ್ಪಿಸಿಕೊಂಡಿದ್ದಾರೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸ್ಥಳ ಪರಿಶೀಲಿಸಿದ ಪೊಲೀಸರು ಮೃತ ದೇಹಗಳನ್ನು ದೇವನಹಳ್ಳಿಯ ಆಕಾಶ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಸಾಗಿಸಿದರು.

ಮನೆಯವರಿಗೆ ಸುಳ್ಳು ಹೇಳಿ ಹೊರಟಿದ್ದರು: ವಿಜಯಪುರ ಪ್ರಗತಿ ಐಟಿಐ ಕಾಲೇಜಿನಲ್ಲಿ ಹರ್ಬಾಜ್, ಜಂಗಮಕೋಟೆಯ ಜ್ಞಾನಜ್ಯೋತಿ ಕಾಲೇಜಿನಲ್ಲಿ ಮನೋಜ್ ವ್ಯಾಸಂಗ ಮಾಡುತ್ತಿದ್ದರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನ ಹಿನ್ನೆಲೆಯಲ್ಲಿ ಕಾಲೇಜಿಗೆ ರಜೆ ಇದ್ದರೂ, ಮನೆಯಲ್ಲಿ ಕಾಲೇಜು ಇದೆ ಎಂದು ಸುಳ್ಳು ಹೇಳಿ ಇಬ್ಬರು ಸ್ನೇಹಿತರೂ ಮನೆಯಿಂದ ಹೊರಟಿದ್ದರು ಎನ್ನಲಾಗಿದೆ. ಹರ್ಬಾಜ್ ತನ್ನ ಡಿಯೋ ದ್ವಿಚಕ್ರ ವಾಹನ ತೆಗೆದುಕೊಂಡು ಸ್ನೇಹಿತ ಮನೋಜ್ ಮನೆಗೆ ತೆರಳಿ ಅಲ್ಲಿಂದ ಇಬ್ಬರು ಜಾಲಿ ರೈಡ್ ಹೊರಟಿದ್ದರು ಎನ್ನಲಾಗಿದೆ. ಜಂಗಮಕೋಟೆಯ ಕಾಲೇಜು ಬಳಿ ಇವರಿಬ್ಬರೂ ದ್ವಿಚಕ್ರವಾಹನದಲ್ಲಿ ಸಂಚರಿಸುತ್ತಿರುವುದು ಸ್ಥಳೀಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net