ಪಾದಚಾರಿಗಳಿಗೆ ಕಾರು ಡಿಕ್ಕಿ:ಇಬ್ಬರಿಗೆ ತೀವ್ರ ಗಾಯ

accident
Published on

ಕಾರ್ಕಳ: ಅಜೆಕಾರು ಸಮೀಪದ ಗುಡ್ಡೆಯಂಗಡಿ ಎಂಬಲ್ಲಿ ಶನಿವಾರ ರಾತ್ರಿ ರಸ್ತೆ ಬದಿ ನಡೆದು ಹೋಗುತ್ತಿದ್ದ ಮೂವರು ಪಾದಚಾರಿಗಳು ಕಾರು ಡಿಕ್ಕಿಯಾಗಿ ಗಾಯಗೊಂಡಿದ್ದಾರೆ. ಇಬ್ಬರು ತೀವ್ರ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅಜೆಕಾರಿನ ರವಿ, ಸುಂದರ, ನಾರಾಯಣ ಗಾಯಗೊಂಡವರು. ಹಾಲಾಡಿ ಗೊಳಿಯಂಗಡಿಗೆ ಇಲೆಕ್ಟ್ರಿಕಲ್ ಲೈನ್‌ನ ಕೆಲಸಕ್ಕೆ ಹೋಗಿದ್ದವರು ಕೆಲಸ ಮುಗಿಸಿ ಸಾಯಂಕಾಲ ಪಿಕ್‌ಅಪ್ ವಾಹನದಲ್ಲಿ ಮುನಿಯಾಲಿನವರೆಗೆ ಬಂದಿದ್ದರು. ಅಲ್ಲಿಂದ ಅಜೆಕಾರು ಕಡೆಗೆ ಹೋಗುವ ಬಸ್ಸಿಗೆ ಹತ್ತಿದ್ದು, ಗುಡ್ಡೆಯಂಗಡಿಯ ಆಟದ ಮೈದಾನದ ಬಳಿ ಇಳಿದು ಅಜೆಕಾರು ಕಡೆಗೆ ನಡೆದುಕೊಂಡು ಬರುತ್ತಿದ್ದಾಗ,  ಹಿಂಬದಿಯಿಂದ ಬಂದ ಕಾರು ಡಿಕ್ಕಿ ಹೊಡೆದು ಪರಾರಿಯಾಗಿದೆ.

ಗಾಯಾಳುಗಳ ಪೈಕಿ ರವಿ ವಾಹನವನ್ನು ಗಮನಿಸಿದರಾದರೂ, ನೋಂದಣಿ ಸಂಖ್ಯೆ ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಅಪಘಾತದಿಂದ ರವಿಯ ಕೈ, ತುಟಿಗೆ ತರಚಿದ ರೀತಿಯ ಗಾಯವಾಗಿದೆ. ಸುಂದರ ಅವರಿಗೆ ತಲೆಯ ಹಿಂಭಾಗದಲ್ಲಿ ತೀವ್ರ ಗಾಯವಾಗಿ ಪ್ರಜ್ಞೆ ತಪ್ಪಿದೆ. ನಾರಾಯಣ ಅವರ ಬಲಗಣ್ಣಿನ ಭಾಗದಲ್ಲಿ ತೀವ್ರ ರಕ್ತಗಾಯವಾಗಿದೆ. ಸಾರ್ವಜನಿಕರ ಸಹಾಯದಿಂದ ಗಾಯಾಳುಗಳನ್ನು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು.  ಹೆಚ್ಚಿನ ಚಿಕತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net