ಪುತ್ತೂರು (ದ.ಕ.): ಮಾನಸಿಕ ಅಸ್ಪಸ್ಥನನ್ನು ಆಸ್ಪತ್ರೆಗೆ ಸೇರಿಸಬೇಕಾದವರು ರಸ್ತೆಯಲ್ಲಿ ಬಿಟ್ಟು ಹೋಗಿ, ಆತ ಮಾಡಿದ ಅವಾಂತರಕ್ಕೆ ಜನರು ಬೆಚ್ಚಿ ಬಿದ್ದಿದ್ದಾರೆ.
ಕುಂಬ್ರದಲ್ಲಿ ಶನಿವಾರ ಬೆಳಗ್ಗೆ ಮಾನಸಿಕ ಅಸ್ವಸ್ಥನೊಬ್ಬ ಸುತ್ತಾಡುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು 112 ಸಂಖ್ಯೆಗೆ ಕರೆ ಮಾಡಿ ವ್ಯವಸ್ಥೆ ಕಲ್ಪಿಸುವಂತೆ ಕೇಳಿಕೊಂಡಿದ್ದಾರೆ. ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಆತನನ್ನು ಸಮರ್ಪಕವಾಗಿ ವಿಚಾರಿಸದೆ ವಾಹನದಲ್ಲಿ ಕೂರಿಸಿ ಕಲ್ಲರ್ಪೆ ಎಂಬಲ್ಲಿ ಬಿಟ್ಟು ಹೋಗಿದ್ದಾರೆ. ಸಂಜೆ ಆತ ಸಂಪ್ಯ ಠಾಣೆಯ ಸಮೀಪಕ್ಕೆ ಬಂದು, ರಸ್ತೆ ಬದಿ ನಿಲ್ಲಿಸಿದ ವಾಹನವನ್ನು ಚಲಾಯಿಸಿ ಮತ್ತೆ ಕುಂಬ್ರದ ಕಡೆಗೆ ಹೋಗಿ ಅಲ್ಲಿ ಕೆಲವು ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಈ ಸಂದರ್ಭ ವಾಹನದಲ್ಲಿದ್ದ ಬಂದೂಕನ್ನು ಕಂಡು ಕೆಲಹೊತ್ತು ಸಾರ್ವಜನಿಕರು ಆತಂಕಗೊಂಡರು.
ಸ್ಥಳಕ್ಕಾಗಮಿಸಿದ ಸಂಪ್ಯ ಪೊಲೀಸ್ ಉಪನಿರೀಕ್ಷಕರು ವಿಚಾರಿಸಿದಾಗ, ಆತ ಕೇರಳ ಮೂಲದ ಅರುಣ್ ಎಂದು ತಿಳಿಯಿತು. ಕೊಟ್ಟಾಯಂನಿಂದ ತಿಂಗಳ ಹಿಂದೆ ಈತ ನಾಪತ್ತೆಯಾಗಿದ್ದ. ಆತನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿ, ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಗೋವರ್ಧನ್ ಎಂಬವರು ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಬಂದೂಕನ್ನು ಠಾಣೆಗೆ ಒಪ್ಪಿಸಿದ್ದರು. ಅದನ್ನು ಹಿಂಪಡೆದು ವಾಹನದಲ್ಲಿಟ್ಟು ಮನೆಗೆ ಹೋಗಲು ಅನುವಾದಾಗ ಮಳೆ ಸುರಿದಿದೆ. ವಾಹನದಲ್ಲೇ ಕೀ ಬಿಟ್ಟು ಪಕ್ಕದ ಅಂಗಡಿಗೆ ಹಾಲು ತರಲು ಹೋಗಿದ್ದಾಗ ಬಂದ ಅರುಣ್ ವಾಹನವನ್ನು ಚಲಾಯಿಸಿಕೊಂಡ ಹೋದರೆಂದು ತಿಳಿದು ಬಂದಿದೆ.