

ಸಕಲೇಶಪುರ : ತಾಲೂಕಿನ ಬಾಗೆ ಗ್ರಾಮ ಸಮೀಪದ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಸಾರಿಗೆ ಬಸ್ ಅಪಘಾತಕ್ಕೀಡಾಗಿ ಪ್ರಯಾಣಿಕರೊಬ್ಬರು ಮೃತಪಟ್ಟು, 7 ಜನ ಗಾಯಗೊಂಡಿದ್ದಾರೆ. ಹಾಸನದ ಹೌಸಿಂಗ್ ಬೋರ್ಡ್‌ನ ಕುವೆಂಪು ಬಡಾವಣೆಯ ಅಮೃತ ಮೂರ್ತಿ (34) ಮೃತರು. ಇವರ ತಂದೆ ನಾಗರಾಜ್, ಹಾಸನ ಜಯನಗರ ಬಡಾವಣೆಯ ಕೃಷ್ಣ, ನಿತ್ಯಾನಂದ, ತುಮಕೂರಿನ ಈರಣ್ಣ, ಧಾರವಾಡದ ದನಿಯಪ್ಪ , ಗುಬ್ಬಿ ತಾಲೂಕು ನಿಟ್ಟೂರಿನ ಹನುಮಂತೇಗೌಡ, ಗುಬ್ಬಿ ತಾಲೂಕು ಮಾವಿನಹಳ್ಳಿಯ ಸಂಪತ್ ಕುಮಾರ್ ಗಾಯಾಳುಗಳು.
ಘಟನೆ ವಿವರ: ಚನ್ನರಾಯಪಟ್ಟಣ ವಿಭಾಗಕ್ಕೆ ಸೇರಿದ ಸಾರಿಗೆ ಬಸ್‌ನಲ್ಲಿ ಇವರೆಲ್ಲರೂ ಬೆಂಗಳೂರಿನಿಂದ ಧರ್ಮಸ್ಥಳ ಕ್ಕೆ ತೆರಳುತ್ತಿದ್ದರು. ಮುಂಜಾನೆ 5.30ರ ಸಮಯದಲ್ಲಿ ಬಾಗೆ ಗ್ರಾಮ ಸಮೀಪ ಸಾಗುತ್ತಿದ್ದ ಬಸ್ಸಿನ ಆಕ್ಸಲ್ ತುಂಡಾಗಿ ಹೆದ್ದಾರಿ ಬದಿಯ ದಿವಾಕರ್ ಎಂಬುವವರ ಮನೆಗೆ ಡಿಕ್ಕಿಹೊಡೆದು ಜೆಎಸ್‌ಎಸ್ ಶಾಲೆಯ ಕಾಂಪೌಂಡ್‌ಗೆ ಡಿಕ್ಕಿ ಹೊಡೆಯಿತು. ಬಸ್ ಮುಂದಿನ ಸೀಟಿನಲ್ಲಿದ್ದ ಅಮೃತರಾಜ್ ಸ್ಥಳದಲ್ಲೇ ಮೃತಪಟ್ಟರು. ಗಾಯಾಳುಗಳು ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ನಂತರ ಹಾಸನದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಡುಗೆ ಮನೆ ಛಿದ್ರ:ನಿಯಂತ್ರಣ ತಪ್ಪಿದ ಬಸ್ ದಿವಾಕರ್ ಎಂಬುವವರ ಮನೆಗೆ ಡಿಕ್ಕಿ ಹೊಡೆದ ಪರಿಣಾಮ ಮನೆಯ ಅಡುಗೆ ಕೋಣೆ ಸಂಪೂರ್ಣ ಛಿದ್ರವಾಗಿದೆ. ಮನೆಯವರೆಲ್ಲರೂ ಮತ್ತೊಂದು ಮನೆಯಲ್ಲಿ ಮಲಗಿದ್ದ ಕಾರಣ ದುರಂತ ತಪ್ಪಿದೆ ಎನ್ನಲಾಗಿದೆ.