

ವಿಜಯವಾಣಿ ಸುದ್ದಿಜಾಲ ಗುರುಪುರ
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹುದ್ದೆಗಳ ಬಗ್ಗೆ ಜಗಳದಿಂದ ರಾಜ್ಯದ ಜನರಿಗೆ ಅಭದ್ರತೆ ಕಾಡುತ್ತಿದೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಡೆಂಘೆ, ಝೀಕಾ ಪ್ರಕರಣ ಹೆಚ್ಚಾಗುತ್ತಿದೆ. ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದರೂ ಸೂಕ್ತ ಔಷಧ ಕೊರತೆ ಹಾಗೂ ಔಷಧ ದರ ಏರಿಕೆಯಾಗಿದೆ. ಕೋವಿಡ್ ಮಾದರಿಯಲ್ಲಿ ಡೆಂಘೆ ರೋಗಿಗಳಿಗೂ ಉಚಿತ ಚಿಕಿತ್ಸೆ ನೀಡಬೇಕು ಎಂದು ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಹೇಳಿದರು.
ಸುರತ್ಕಲ್‌ನಲ್ಲಿ ಜನರಿಂದ ಮನವಿ ಸ್ವೀಕರಿಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆ ಬಜೆಟ್ ಮಂಡನೆ ಮಾಡಿದ್ದಾಗಿ ಹೇಳಿಕೊಳ್ಳುತ್ತಿದ್ದಾರೆ. ಆದರೆ ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ಇಲಾಖೆಗಳಿಗೆ ಸೂಕ್ತ ಅನುದಾನ ನೀಡದೆ, ಗ್ಯಾರಂಟಿ ಜಾರಿಗೊಳಿಸಲು ಎಸ್‌ಸಿ ಮತ್ತು ಎಸ್‌ಟಿ ಸಮುದಾಯಕ್ಕೆ ಮೀಸಲಿಟ್ಟ ಅನುದಾನ ವರ್ಗಾವಣೆ ಮಾಡುವ ಮೂಲಕ ರಾಜ್ಯದ ಅಭಿವೃದ್ಧಿಗೆ ಬ್ರೇಕ್ ಹಾಕಿದ್ದಾರೆ ಎಂದು ಆರೋಪಿಸಿದರು.
ಮಂಗಳೂರು ಉತ್ತರ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ನಯಾಪೈಸೆ ನೀಡಿಲ್ಲ. ಹಣವಿಲ್ಲದೆ ಕಾಮಗಾರಿ ಮುಂದುವರಿಸಲು ಗುತ್ತಿಗೆದಾರರು ಮುಂದೆ ಬರುತ್ತಿಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ರಾಜ್ಯದ ಅಭಿವೃದ್ಧಿ ಕನಿಷ್ಠ 10 ವರ್ಷ ಹಿಂದಕ್ಕೆ ತೆರಳಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರವು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅನುದಾನವನ್ನು 20 ಸಾವಿರ ಕೋಟಿ ರೂ.ನಿಂದ 18 ಸಾವಿರ ಕೋಟಿ ರೂ.ಗೆ ಇಳಿಸಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಅಭಿವೃದ್ಧಿಗೆ ಇಡಲಾದ ವಿಶೇಷ ಅನುದಾನದಲ್ಲಿ 11 ಸಾವಿರ ಕೋಟಿ ರೂ.ಗಳನ್ನು ಪಂಚ ಗ್ಯಾರಂಟಿಗಳಿಗೆ ವರ್ಗಾಯಿಸುವ ರಾಜ್ಯ ಪರಿಷತ್‌ನ ನಿರ್ಧಾರ ಸೂಕ್ತವಾಗಿಲ್ಲ ಎಂದು ಶಾಸಕ ಭರತ್ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.
ರೈತ ವಿರೋಧಿ ಸರ್ಕಾರ:ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳನ್ನು ಟೀಕಿಸಿದ ಶಾಸಕ ಭರತ್ ಶೆಟ್ಟಿ, ಬಿಜೆಪಿ ಸರ್ಕಾರ ಕೃಷಿಗೆ 9,456 ಕೋಟಿ ರೂ ಮೀಸಲಿಟ್ಟಿದ್ದು, ಪ್ರಸಕ್ತ ಸರ್ಕಾರ ಇದನ್ನು 5,860 ಕೋಟಿ ರೂ.ಗೆ ಕಡಿತಗೊಳಿಸಿದೆ. ಇದು ರೈತ ವಿರೋಧಿ ಸರ್ಕಾರ ಎಂಬುದು ದೃಢಪಟ್ಟಿದೆ. ಬಿಜೆಪಿ ಸರ್ಕಾರ ಆರಂಭಿಸಿದ್ದ ರೈತ ವಿದ್ಯಾನಿಧಿ, ರೈತ ಶಕ್ತಿ ಯೋಜನೆ ಹಾಗೂ ಬಜೆಟ್‌ನಲ್ಲಿ ಘೋಷಿಸಿದ ಭೂಸಿರಿ ಯೋಜನೆ, 56 ಲಕ್ಷ ಸಣ್ಣ ರೈತರಿಗೆ 180 ಕೋಟಿ ರೂ. ಮೊತ್ತದ ಜೀವನಜ್ಯೋತಿ ವಿಮಾ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಕೈಬಿಟ್ಟಿದೆ. ಬಜೆಟ್‌ನಲ್ಲಿ ಶಾಲಾ ಮಕ್ಕಳಿಗೆ 1000 ಹೊಸ ಬಸ್, ಪದವಿಯವರೆಗೂ ಎಲ್ಲ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದಾಗಿ ಬಿಜೆಪಿ ಘೋಷಿಸಿತ್ತು. ಆದರೆ ಈ ಸರ್ಕಾರ 5 ಇಂಜಿನಿಯರಿಂಗ್ ಕಾಲೇಜಗಳನ್ನು ಐಐಟಿಗೆ ಮೇಲ್ದರ್ಜೆಗೊಳಿಸುವ ಪ್ರಸ್ತಾವ ಕೈಬಿಟ್ಟದೆ ಎಂದು ವಾಗ್ದಾಳಿ ನಡೆಸಿದರು.
ಜಿಯುಆರ್-ಜು-10-ಸುರತ್ಕಲ್-1-
ಜಿಯುಆರ್-ಜು-10-ಸುರತ್ಕಲ್-2
ಜಿಯುಆರ್-ಜು-10-ಸುರತ್ಕಲ್-3
ಸುರತ್ಕಲ್, ಶಾಸಕ, ಡಾ.ಭರತ್ ಶೆಟ್ಟಿ, ಅಹವಾಲು, ಸ್ವೀಕಾರ,