

ಪಾಂಡವಪುರ: ತಾಲೂಕಿನ ಬನ್ನಂಗಾಡಿ ಗ್ರಾಮದಲ್ಲಿ ಶಾಸಕ ದರ್ಶನ್‌ಪುಟ್ಟಣ್ಣಯ್ಯ ನೇತೃತ್ವದಲ್ಲಿ ನಡೆಯುತ್ತಿರುವ ‘ಸರ್ಕಾರಿ ಸೇವೆಗಳು ನಿಮ್ಮ ಮನೆಯ ಬಾಗಿಲಿಗೆ’ ಕಾರ್ಯಕ್ರಮದ ನಾಲ್ಕನೆಯ ದಿನವಾದ ಗುರುವಾರ ಸಾರ್ವಜನಿಕರಿಂದ 173 ವಿವಿಧ ಅರ್ಜಿಗಳು ಸ್ವೀಕೃತಗೊಂಡವು.
ಸರ್ಕಾರದಿಂದ ಸಾರ್ವಜನಿಕರಿಗೆ ದೊರೆಯುವ ಸೌಲಭ್ಯಗಳನ್ನು ಜನರ ಮನೆಯ ಬಾಗಿಲಿಗೆ ತಲುಪಿಸಬೇಕು ಎಂಬ ಉದ್ದೇಶದಿಂದ ನಡೆಸಲಾಗುತ್ತಿರುವ ಈ ಕಾರ್ಯಕ್ರಮದಲ್ಲಿ ಕಂದಾಯ, ಗ್ರಾಪಂ, ಕೃಷಿ, ಸೆಸ್ಕ್, ಆರೋಗ್ಯ, ತೋಟಗಾರಿಕೆ, ಪಂಚಾಯತ್ ರಾಜ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಕಳೆದ ಸೋಮವಾರದಿಂದ ಪ್ರತಿನಿತ್ಯ ಬೆಳಗ್ಗೆಯಿಂದ ಸಂಜೆಯವರೆಗೂ ಸ್ಥಳದಲ್ಲಿ ಹಾಜರಿದ್ದು ಬನ್ನಂಗಾಡಿ ಗ್ರಾಪಂ ವ್ಯಾಪ್ತಿಯ ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ. ಕಾರ್ಯಕ್ರಮದಡಿಯಲ್ಲಿ ಸಾರ್ವಜನಿಕರು ಮತ್ತು ರೈತರು ಸಾಮಾಜಿಕ ಭದ್ರತೆ, ಇ-ಸ್ವತ್ತು ಸೇರಿದಂತೆ ವಿವಿಧ ಸೌಲಭ್ಯಕ್ಕಾಗಿ ಅಧಿಕಾರಿ ಅರ್ಜಿ ಸಲ್ಲಿಸಿ ಸೇವೆ ಪಡೆದುಕೊಳ್ಳುತ್ತಿದ್ದಾರೆ. ಅಧಿಕಾರಿಗಳು ಯಾವುದೇ ತಕರಾರು ಇಲ್ಲದೆ ಸ್ಥಳದಲ್ಲಿಯೇ ಬಗೆಹರಿಸಬಹುದಾದ ಹಲವು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸುವ ಕೆಲಸ ಮಾಡುತ್ತಿದ್ದು, ಕೋರ್ಟ್ ವ್ಯಾಜ್ಯ ಹೊರತುಪಡಿಸಿ ದಾಯಾದಿಗಳ ನಡುವಿನ ವಿವಾದ ಮುಂತಾದ ಸಣ್ಣಪುಟ್ಟ ಸಮಸ್ಯೆಗಳಿಗೆ ಗ್ರಾಮದ ಯಜಮಾನರು ಸಮ್ಮುಖದಲ್ಲಿ ವಿವಾದ ಇತ್ಯಾರ್ಥಪಡಿಸಿ ಪರಿಹಾರ ಕಂಡುಕೊಳ್ಳಲಾಗುತ್ತಿದೆ.
ಗ್ರಾಮದಲ್ಲಿ ಇರುವಂತಹ ಸರ್ಕಾರಿ ಜಮೀನುಗಳನ್ನು ಗುರುತಿಸಿ ಒತ್ತುವರಿ ತೆರವು ಮಾಡುವ ಕೆಲಸವನ್ನು ಸರ್ವೇ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಮಾಡುತ್ತಿದ್ದಾರೆ. ಇದೇ ವೇಳೆ ರಸ್ತೆ ಒತ್ತುವರಿ ಬಗ್ಗೆ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ನಿರ್ದೇಶನದ ಮೇರೆಗೆ ಜೆಸಿಬಿ ಮೂಲಕ ರಸ್ತೆ ಒತ್ತುವರಿ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಕಾರ್ಯಕ್ರಮದಲ್ಲಿ ಸ್ವೀಕೃತಗೊಂಡಿರುವ 173 ಅರ್ಜಿಗಳ ಪೈಕಿ ಜಾತಿ ಮತ್ತು ಆದಾಯ ದೃಢೀಕರಣ ಪ್ರಮಾಣಕ್ಕಾಗಿ-40, ವಂಶವೃಕ್ಷ-24, ವಾಸಸ್ಥಳ ಧೃಡೀಕರಣಕ್ಕೆ-5, ಸಾಮಾಜಿಕ ಭದ್ರತಾ ಯೋಜನೆಯಡಿಯಲ್ಲಿ-25, ಪಿಂಚಣಿ ಹೆಚ್ಚಳಕ್ಕಾಗಿ ಅಂದರೆ 600 ರೂ.ನಿಂದ 1200ರ ಯೋಜನೆಗಾಗಿ 40 ಅರ್ಜಿಗಳು. ಪೌತಿ ಖಾತೆ-28, ಆರ್‌ಟಿಸಿ ತಿದ್ದುಪಡಿಗಾಗಿ-40 ಅರ್ಜಿಗಳು ಸ್ವೀಕೃತಗೊಂಡಿವೆ ಎಂದು ಉಪತಹಸೀಲ್ದಾರ್ ಲಕ್ಷ್ಮೀಕಾಂತ್ ತಿಳಿಸಿದರು.
ಗ್ರಾಮದ ಮುಖಂಡರಾದ ಶ್ರೀನಿವಾಸ್, ಬಿ.ಜೆ.ಸ್ವಾಮಿ, ಲವಕುಮಾರ್, ಬಿ.ಕೆ.ರೇವಣ್ಣ, ಕೆ.ಕುಬೇರ ಇತರರು ಇದ್ದರು.