

ಚಿಕ್ಕಮಗಳೂರು: ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಈ ಎರಡೂ ಅಂಶಗಳನ್ನು ಸಮನಾಗಿ ಸ್ವೀಕರಿಸಿದರೆ ಭವಿಷ್ಯದಲ್ಲಿ ಯಶಸ್ಸು ನಿಮ್ಮದಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವ್ ಹೇಳಿದರು. ಭಾರತ ಸ್ವಾತಂತ್ರ್ಯದ ಅಮೃತಮಹೋತ್ಸವ ವರ್ಷ, ಕನ್ನಡ ಕಾಯಕ ವರ್ಷ ಹಾಗೂ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಪ್ರಯುಕ್ತ ಜಿಲ್ಲಾಡಳಿತ, ವಿವಿಧ ಇಲಾಖೆ, ಜಿಲ್ಲಾ ಮತ್ತು ತಾಲೂಕು ಸೀಶಕ್ತಿ ಒಕ್ಕೂಟದ ಆಶ್ರಯದಲ್ಲಿ ಜಿಲ್ಲಾ ಆಟದ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಹೆಣ್ಣು ಮಕ್ಕಳ ಗ್ರಾಮೀಣ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಹೆಣ್ಣು ಮಕ್ಕಳಿಗೆ ಉತ್ತಮ ವೇದಿಕೆ ಅಗತ್ಯ:
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಪ್ರಯುಕ್ತ ಪ್ರತಿ ಜಿಲ್ಲೆಯಲ್ಲಿ ಹೆಣ್ಣು ಮಕ್ಕಳಿಗಾಗಿ ಕ್ರೀಡಾಕೂಟ ಆಯೋಜಿಸಲಾಗುತ್ತಿದೆ. ಈ ಜಿಲ್ಲೆಯಲ್ಲಿ ಹೆಣ್ಣು ಮಕ್ಕಳಿಗಾಗಿ ಪ್ರತಿ ತಿಂಗಳು ಒಂದು ಕ್ರೀಡಾಕೂಟ ನಡೆಸುತ್ತಿರುವುದು ಖುಷಿಯ ಸಂಗತಿ. ಈ ನಿಟ್ಟಿನಲ್ಲಿ ಹೆಣ್ಣು ಮಕ್ಕಳಿಗೆ ಉತ್ತಮ ವೇದಿಕೆ ಕಲ್ಪಿಸಬೇಕು. ಅಂತೆಯೇ ಕ್ರೀಡಾಕೂಟದಲ್ಲಿ ಸಕ್ರಿಯವಾಗಿ ಭಾಗವಹಿಸುವುದೂ ಅಗತ್ಯ ಎಂದು ಹೇಳಿದರು. ಹೆಣ್ಣುಮಕ್ಕಳಿಗೆ ಸಂಬಂಧಿಸಿದ ಕ್ರೀಡೆಗಳು, ಸಾಂಸ್ಕøತಿಕ ಕಾರ್ಯಕ್ರಮಗಳು, ಪ್ರಬಂಧ ಸ್ಪರ್ಧೆಗಳಂಥ ಕಾರ್ಯಕ್ರಮ ಆಯೋಜಿಸುವುದರಿಂದ ಅವರ ಪ್ರತಿಭೆ ಹೊರಹಾಕಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ರಾಜ್ಯಮಟ್ಟಕ್ಕೆ ಪ್ರೋತ್ಸಾಹಿಸಬೇಕು:
ಅಧ್ಯಕ್ಷತೆ ವಹಿಸಿದ್ದ ಜಿಪಂ ಸಿಇಒ ಎಸ್.ಪೂವಿತಾ ಮಾತನಾಡಿ, ತಾಲೂಕು ಮಟ್ಟದ ಕ್ರೀಡೆಯಲ್ಲಿ ಆಯ್ಕೆಯಾದ ಹೆಣ್ಣು ಮಕ್ಕಳನ್ನು ಜಿಲ್ಲಾಮಟ್ಟಕ್ಕೆ ಕರೆತಂದು ವಿಜೇತರಾದವರನ್ನು ಗುರುತಿಸಿ ರಾಜ್ಯಮಟ್ಟದಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಬೇಕು. ಇದು ಇತರ ಹೆಣ್ಣು ಮಕ್ಕಳಿಗೆ ಸ್ಫೂರ್ತಿಯಾಗಲಿದೆ ಎಂದು ತಿಳಿಸಿದರು. ಗ್ರಾಮೀಣ ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡೆಯಲ್ಲಿ ಭಾಗವಹಿಸುವಂತೆ ಮಾಡಬೇಕು. ಹೆಣ್ಣು ಮಕ್ಕಳ ಮೇಲೆ ನಡೆಯುವ ದೌರ್ಜನ್ಯ, ಕಿರುಕುಳ ತಡೆಗಟ್ಟುವ ಮೂಲಕ ಅವರನ್ನು ಬಲಿಷ್ಠರನ್ನಾಗಿ ಮಾಡಬೇಕು. ಕರೊನಾ ಹಿನ್ನೆಲೆಯಲ್ಲಿ ವೈಯಕ್ತಿಕ ಅಂತರ ಕಾಯ್ದುಕೊಂಡು ಕ್ರೀಡೆಯಲ್ಲಿ ಭಾಗವಹಿಸುವಂತೆ ಕಿವಿಮಾತು ಹೇಳಿದರು.
ದೇಹ ಸದೃಢವಾಗಿದ್ದರೆ ಮನಸು ಸದೃಢ:
ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಅರುಣಕುಮಾರಿ ಮಾತನಾಡಿ, ದೇಹ ಸದೃಢವಾಗಿದ್ದರೆ ಮನಸ್ಸು ಕೂಡ ಸದೃಢವಾಗಿರುತ್ತದೆ. ಹೆಣ್ಣು ಮಕ್ಕಳು ಕ್ರೀಡೆಯಲ್ಲಿ ಹೆಚ್ಚು ಭಾಗವಹಿಸುವುದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ಬಾಲ್ಯವಿವಾಹ, ಅತ್ಯಾಚಾರ, ದೌರ್ಜನ್ಯಗಳಂತಹ ಪ್ರಕರಣಗಳನ್ನು ಕೊನೆಗಾಣಿಸಲು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ನಡೆಸಲಾಗುತ್ತಿದೆ. ದೌರ್ಜನ್ಯಕ್ಕೆ ಒಳಗಾದ ಮಹಿಳೆ ಮತ್ತು ಮಕ್ಕಳಿಗೆ ಉಚಿತ ಕಾನೂನು ಸೇವೆ ಒದಗಿಸಿ ತಕ್ಷಣವೇ ಪರಿಹಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಿ.ಮಲ್ಲಿಕಾರ್ಜುನ್, ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ವಿ.ಮಲ್ಲೇಶಪ್ಪ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಡಾ. ಮಂಜುಳ ಹುಲ್ಲಹಳ್ಳಿ, ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ದಿವ್ಯಾ ದೇವರಾಜ್, ತಾಪಂ ಇಒ ಎಚ್.ಕೆ.ತಾರಾನಾಥ್, ಬಿಇಒ ಮಂಜುನಾಥ್ ಮತ್ತಿತರರು ಇದ್ದರು.