

ಉಪ್ಪಿನಬೆಟಗೇರಿ: ನಾಡಿನಲ್ಲಿ ವಾಸಿಸುವ ಪ್ರತಿಯೊಂದು ಜೀವಿಗಳು ಹಾಗೂ ಬೆಳೆಗಳು ಸಮೃದ್ಧವಾಗಿ ಬೆಳೆದು ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕು ಎಂಬ ನಿಟ್ಟಿನಲ್ಲಿ ಸ್ಥಳೀಯ ಮೂರುಸಾವಿರ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿಗಳು 21 ದಿನಗಳ ಕಾಲ ಮೌನಾನುಷ್ಠಾನ ಆಚರಿಸುತ್ತಿದ್ದು, ಭಕ್ತ ಸಂಕುಲದಲ್ಲಿ ಸಂತಸ ಮನೆ ಮಾಡಿದೆ.
ಅಧಿಕ ಮಾಸದಲ್ಲಿ ಸ್ವಾಮೀಜಿಗಳ ಮೌನಾನುಷ್ಠಾನದ ಜತೆಗೆ ಖೇಡಗಿಯ ಪ್ರಭುದೇವರಿಂದ ನಾಲ್ವತವಾಡದ ಶ್ರೀ ವೀರೇಶ್ವರ ಪುಣ್ಯ ಪುರುಷರ ಪ್ರವಚನ ನಡೆಯುತ್ತಿದೆ.
ಶುಕ್ರವಾರ ಜರುಗಿದ ಪ್ರವಚನದಲ್ಲಿ ಶ್ರೀ ಪ್ರಭುದೇವರು ಮಾತನಾಡಿ, ಸಮಾಜದಲ್ಲಿ ಸತಿ-ಪತಿಗಳಾಗಿ, ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಉಳ್ಳವರೇ ನಿಜವಾದ ದಂಪತಿ. ಪರಸ್ಪರ ಅರಿತುಕೊಂಡು ಬಾಳುವುದರೊಂದಿಗೆ ಸುಖ ಬಂದಾಗ ಹಿಗ್ಗದೆ, ಕಷ್ಟ ಬಂದಾಗ ಕುಗ್ಗದೆ, ಧೈರ್ಯವಾಗಿ ಮುನ್ನಡೆದು ಜೀವನ ನಡೆಸಬೇಕು. ಎಂಥಹ ಪರಿಸ್ಥಿತಿ ಬಂದರೂ ಗುರುವಿನ ನಾಮಸ್ಮರಣೆ ಬಿಡಬಾರದು. ಮುಂದೆ ಗುರಿ ಇದ್ದರೆ ಹಿಂದೆ ಗುರು ಇದ್ದೇ ಇರುತ್ತಾನೆ. ಅದನ್ನು ಅರಿಯಬೇಕು. ಪ್ರಪಂಚದ ಪ್ರತಿಯೊಂದು ಜೀವರಾಶಿಗಳು ಸುಖ-ಸಮೃದ್ಧಿಯಿಂದ ಇರಬೇಕು ಎಂಬ ನಿಟ್ಟಿನಲ್ಲಿ ಶ್ರೀ ಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ 21 ದಿನಗಳ ಕಾಲ ಮೌನ ಅನುಷ್ಠಾನದ ಮೊರೆ ಹೋಗಿದ್ದಾರೆ. ಸ್ವಾಮೀಜಿಗಳಾದವರು ತಮ್ಮ ಭಕ್ತ ಸಂಕುಲ ಚೆನ್ನಾಗಿ ಇರಬೇಕೆಂದು ಬಯಸುತ್ತಾರೆ. ನಾಡಿಗೆ ಉತ್ತಮ ಮಳೆ, ಮಳೆಗೆ ತಕ್ಕಂತೆ ಬೆಳೆ, ಬೆಳೆಗೆ ತಕ್ಕಂತೆ ಯೋಗ್ಯ ಬೆಲೆ ರೈತರ ಕೈ ಸೇರಿದಾಗ ಎಲ್ಲರೂ ನೆಮ್ಮದಿಯುತ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು.