ದೇವರು ತೋರಿದ ದಾರಿ ಸ್ವೀಕರಿಸಿ

h13-kims
Published on

ಹುಬ್ಬಳ್ಳಿ: ದೇವರು ತೋರಿದ ದಾರಿಯನ್ನು ಎಲ್ಲರೂ ಸ್ವೀಕರಿಸಬೇಕು. ಇದರ ಜತೆಗೆ ತಾಳ್ಮೆಯೂ ಅತ್ಯಗತ್ಯ ಎಂದು ವೆಲ್ಲೋರ ಮೆಡಿಕಲ್ ಕಾಲೇಜ್ ಪ್ಲಾಸ್ಟಿಕ್ ಸರ್ಜರಿ ವಿಭಾಗದ ವಿಶ್ರಾಂತ ಮುಖ್ಯಸ್ಥೆ ಪದ್ಮಶ್ರೀ ಡಾ. ಪ್ರೇಮಾ ಧನರಾಜ ಅಭಿಪ್ರಾಯಪಟ್ಟರು.
ಇಲ್ಲಿಯ ಕಿಮ್ಸ್ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಎಂಬಿಬಿಎಸ್ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಚಿಕ್ಕ ವಯಸ್ಸಿನಲ್ಲಿಯೇ ಮುಖ ಸುಟ್ಟು ಹೋಯಿತು. ಬೇರೆಯವರು ಆಗಿದ್ದರೆ ಅನ್ಯ ಮಾರ್ಗ ತುಳಿಯುತ್ತಿದ್ದರು. ನನ್ನ ತಾಯಿ ನನಗೆ ಮರು ಜನ್ಮ ನೀಡಿದರು. ವೈದ್ಯೆ ಆಗಬೇಕೆಂದು ದಾರಿ ತೋರಿದರು. ವೈದ್ಯ ವೃತ್ತಿ ಆರಂಭಿಸಿದೆ ಎಂದರು.
ನಾನು ಶಾಲಾ-ಕಾಲೇಜ್ ದಿನಗಳಿಂದಲೇ ಅಡೆತಡೆಗಳನ್ನು ಅನುಭವಿಸಿದೆ. ಅವುಗಳನ್ನು ಮೆಟ್ಟಿ ನಿಂತೆ. ಮಾನಸಿಕ-ದೈಹಿಕ ಸಾಮರ್ಥ್ಯ ವೃದ್ಧಿಸಿಕೊಂಡೆ. ದೇವರು ನಮಗಾಗಿ ಎಲ್ಲ ದಾರಿಗಳನ್ನು ತೋರಿದ. ಹಾಗಾಗಿಯೇ ಇಂದು ನಿಮ್ಮ ಮುಂದೆ ಬಂದು ನಿಂತಿದ್ದೇನೆ ಎಂದು ತಮ್ಮ ಹಳೆಯ ದಿನಗಳನ್ನು ಮೆಲಕು ಹಾಕಿದರು.
ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಂ.ಕೆ. ರಮೇಶ ಮಾತನಾಡಿ, ಪ್ರತಿ ವರ್ಷ 15 ಲಕ್ಷ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆಯುತ್ತಾರೆ. ಅದರಲ್ಲಿ 60 ಸಾವಿರ ಜನರು ಎಂಬಿಬಿಎಸ್ ಆಯ್ಕೆ ಮಾಡಿಕೊಳ್ಳುತ್ತಾರೆ. ಕಿಮ್ಸ್‌ನಂಥ ವೈದ್ಯಕೀಯ ಸಂಸ್ಥೆ ನಿಮಗೆ ಸಿಕ್ಕಿರುವುದು ಪುಣ್ಯ ಎಂದರು.
ಎಂಬಿಬಿಎಸ್ ಮುಗಿಸಿ ಬರೀ ವೈದ್ಯರಾಗುವ ಕನಸು ಕಾಣಬೇಡಿ. ಜಗತ್ತು ವಿಶಾಲ ಮತ್ತು ಸ್ಪರ್ಧಾತ್ಮಕವಾಗಿದೆ. ನೀವು ಇದರಲ್ಲಿ ಧುಮುಕಬೇಕು. ನಿಮ್ಮದೇ ಆದ ಜೀವನವನ್ನು ರೂಢಿಸಿಕೊಂಡು ಇತರರಿಗೆ ಮಾದರಿಯಾಗಬೇಕು ಎಂದು ಸಲಹೆ ನೀಡಿದರು.
ಕಿಮ್ಸ್ ಹಳೆಯ ವಿದ್ಯಾರ್ಥಿ, ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಅವರು ತಾವು ಈ ಸಂಸ್ಥೆಯಲ್ಲಿ ಓದಿದ್ದನ್ನು ಸ್ಮರಿಸಿಕೊಂಡರು.
84ನೇ ಬ್ಯಾಚ್‌ನ ವೈದ್ಯರು ಕೊಡುವ ಬಹುಮಾನವನ್ನು ಡಾ. ಕಾರ್ತಿಕ ಅಚಲಕರ್, ನೂರ್‌ಜಹಾನ್ ಕಮ್ಮಾರ ಪ್ರಶಸ್ತಿಯನ್ನು ಡಾ. ಕಾವ್ಯ ಕೆ., ಡಾ. ಸೌಂದರ್ಯಾ, ಫಕೀರುದ್ದೀನ್ ಕಮ್ಮಾರ ಪ್ರಶಸ್ತಿಯನ್ನು ಡಾ. ಅಜೀಮ್, ಡಾ. ಸನತ್, ಡಾ. ಜಯಲಲಕ್ಷ್ಮೀ ಕಾಮತ್ ಪ್ರಶಸ್ತಿಯನ್ನು ಡಾ. ಹೃಷಿಕೇಷ ಕುಲಕರ್ಣಿ ಅವರಿಗೆ ಪ್ರದಾನ ಮಾಡಲಾಯಿತು.
ನಿರ್ದೇಶಕ ಡಾ. ಎಸ್.ಎಫ್.ಕಮ್ಮಾರ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಡಾ. ಈಶ್ವರ ಹೊಸಮನಿ, ಆರ್‌ಎಂಒ ಡಾ. ಸಿದ್ದೇಶ್ವರ ಕಟಕೋಳ, ವಿವಿಧ ವಿಭಾಗದ ಮುಖ್ಯಸ್ಥರಾದ ಡಾ.ಜಿ.ಸಿ. ಪಾಟೀಲ, ಡಾ. ಹೇಮಲತಾ, ಡಾ. ಜಾನಕಿ ತೊರವಿ, ಡಾ. ಮಹೇಶಕುಮಾರ ಎಸ್., ಡಾ. ಅರುಣಕುಮಾರ ಸಿ., ಡಾ. ವಿಕ್ರಮ್ ಭಟ್, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net