ಪರೀಕ್ಷೆಗಳನ್ನು ಸವಾಲಾಗಿ ಸ್ವೀಕರಿಸಿ

Oplus_131072
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ 600ಕ್ಕೂ ಹೆಚ್ಚ ಅಂಕ ಹಾಗೂ ಎ ಪ್ಲಸ್ ಫಲಿತಾಂಶ ಪಡೆದ ಚನ್ನರಾಯಪಟ್ಟಣ ತಾಲೂಕಿನ 81 ವಿದ್ಯಾರ್ಥಿಗಳನ್ನು ಶಾಸಕ ಸಿ.ಎನ್.ಬಾಲಕೃಷ್ಣ ಅಭಿನಂದಿಸಿದರು.
Published on

ಚನ್ನರಾಯಪಟ್ಟಣ: ಕಲಿಕೆ ಸಮಯದಲ್ಲಿ ಮೊಬೈಲ್ ಗೀಳು ಅಂಟಿಸಿಕೊಳ್ಳುವುದು ಸರಿಯಲ್ಲ, ವರ್ಷವಿಡೀ ಚೆನ್ನಾಗಿ ಓದಬೇಕು. ವರ್ಷದ ಕೊನೆಯಲ್ಲಿ ಬರುವ ಪರೀಕ್ಷೆಗಳನ್ನು ವಿದ್ಯಾರ್ಥಿಗಳು ಸವಾಲಾಗಿ ಸ್ವೀಕರಿಸಿದಾಗ ಮಾತ್ರ ಗುರಿ ಮುಟ್ಟಲು ಸಾಧ್ಯ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಕಿವಿಮಾತು ಹೇಳಿದರು.

ಪಟ್ಟಣದ ಬಿಇಒ ಕಚೇರಿಯ ಹಿಂಭಾಗದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಸಿ.ಎನ್.ಬಾಲಕೃಷ್ಣ ಸಭಾಂಗಣದಲ್ಲಿ 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 600ಕ್ಕೂ ಹೆಚ್ಚು ಅಂಕ ಹಾಗೂ ವಿಜಯ ಸಂಕಲ್ಪ ಸಹಕಾರದಿಂದ ಎ ಪ್ಲಸ್ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ, ವಿದ್ಯಾರ್ಥಿಗಳನ್ನು ಅಭನಂದಿಸಿ ಮಾತನಾಡಿದರು.

ತಾಲೂಕಿನಲ್ಲಿ 2,866 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎದುರಿಸಿದ್ದು, ಈ ಪೈಕಿ 2,200 ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಶೇ.77ರಷ್ಟು ಫಲಿತಾಂಶ ದಾಖಲಾಗಿದೆ.

ಸರ್ಕಾರಿ ಶಾಲೆಯಲ್ಲಿನ 84 ವಿದ್ಯಾರ್ಥಿಗಳು, ಅನುದಾನಿತ ಶಾಲೆಗಳ 7 ವಿದ್ಯಾರ್ಥಿಗಳು, ಅನುದಾನರಹಿತ ಶಾಲೆಯ 47 ವಿದ್ಯಾರ್ಥಿಗಳು ಎ ಪ್ಲಸ್‌ನಲ್ಲಿ ತೇರ್ಗಡೆ ಹೊಂದಿದೆ. ಆವರೆಲ್ಲರನ್ನೂ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇಂದು ಇಲಾಖೆಯಿಂದ ಅಭಿನಂದಿಸುವ ಕೆಲಸವಾಗುತ್ತಿದೆ.

75 ಮಕ್ಕಳಿಗೆ ನಡೆಸಿದ ವಿಜಯ ಸಂಕಲ್ಪ ಕಾರ್ಯಕ್ರಮದಲ್ಲಿ 51ವಿದ್ಯಾರ್ಥಿಗಳು ಎ ಪ್ಲಸ್ ಫಲಿತಾಂಶ ಪಡೆದಿದ್ದಾರೆ. ಈ ಪೈಕಿ ಇಬ್ಬರು ವಿದ್ಯಾರ್ಥಿಗಳು ತಾಲೂಕಿಗೆ ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸಿದ ಹೆಗ್ಗಳಿಕೆ ಇದೆ. ಶಿಕ್ಷಣ ಸಚಿವರು ಪರೀಕ್ಷೆಗಳು ಶಿಸ್ತುಬದ್ಧವಾಗಿ ನಡೆಯಬೇಕು, ನೈಜ ಫಲಿತಾಂಶ ಹೊರಬರಬೇಕು ಎಂಬ ಆಶಯ ಹೊಂದಿದ್ದ ಪರಿಣಾಮ ರಾಜ್ಯದಲ್ಲಿ ಗುಣಾತ್ಮಕ ಫಲಿತಾಂಶ ಬಂದಿದೆ. ಅನುತ್ತೀರ್ಣ ಆದವರು ಧೃತಿಗೆಡುವುದು ಬೇಡ. ಮರು ಪರೀಕ್ಷೆಗಳಿಗೆ ಅವಕಾಶವಿದೆ. ಇದರಲ್ಲಿ ಸಫಲತೆ ಹೊಂದಬೇಕು ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವರಾಜೇಗೌಡ ಮಾತನಾಡಿ, ಸಿಬಿಎಸ್‌ಇ ಮತ್ತು ಐಸಿಎಸ್‌ಸಿ ತರಗತಿಗಳಲ್ಲಿ 100ಕ್ಕೆ 33 ಅಂಕ ಗಳಿಸಿದರೆ ಪಾಸ್ ಆಗುವ ವ್ಯವಸ್ಥೆ ಇದೆ. ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲಿ ಆಂತರಿಕ ಮೌಲ್ಯಮಾಪನದಲ್ಲಿ 20ಕ್ಕೆ 20 ಅಂಕ ಪಡೆದು, ಉಳಿದಂತೆ 80 ಅಂಕಗಳಿಗೆ 28 ಅಂಕ ಪಡೆದರೆ ಪಾಸಾಗುವ ವ್ಯವಸ್ಥೆ ಇದ್ದು, ಈ ತಾರತಮ್ಯ ಹೋಗಲಾಡಿಸುವ ನಿಟ್ಟಿನಲ್ಲಿ ಶಾಸಕರು ವಿಧಾನಸಭೆಯಲ್ಲಿ ವಿಚಾರ ಮಂಡಿಸಿ ಮಂತ್ರಿಗಳ ಗಮನ ಸೆಳೆಯಬೇಕು. ಆದೇ ರೀತಿ ಶಿಕ್ಷಕರಿಗೆ ಪರ್ಯಾಯ ಬೋಧನೆಗೆ ಸೂಚಿಸಿದ್ದು, ಶಿಕ್ಷಣ ಇಲಾಖೆ ರಜೆಸಹಿತ ಇಲಾಖೆ, ಬೇಸಿಗೆ ರಜೆ ಇರುವುದರಿಂದ ಶಿಕ್ಷಕರು ಬಹುತೇಕ ಸೌಲಭ್ಯ ವಂಚಿತರಾಗುತ್ತಿದ್ದೇವೆ. ನಮ್ಮ ಇಲಾಖೆಯನ್ನು ರಜೆರಹಿತ ಇಲಾಖೆ ಎಂದು ಘೋಷಿಸಿದರೆ ಸರ್ಕಾರದ ಸೌಲಭ್ಯ ಸಿಗುತ್ತವೆ. ಇದರಿಂದ ಪರ್ಯಾಯ ಬೋಧನೆಗೆ ಹೆಚ್ಚು ಅನುಕೂಲವಾಗಲಿದೆ. ಈ ಕುರಿತಾಗಿ ಶಾಸಕರು ಸರ್ಕಾರದ ಗಮನಕ್ಕೆ ತರಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಉತ್ತರಿಸಿದ ಶಾಸಕರು, ಈ ಕುರಿತಾಗಿ ಶಾಸನಸಭೆಯಲ್ಲಿ ಮಾತನಾಡಲಾಗುವುದು. ಕೇಂದ್ರ ಪಠ್ಯದಂತೆ ವಿದ್ಯಾರ್ಥಿಗಳು ಪಾಸ್ ಆಗುವ ಅಂಕಗಳನ್ನು ಕಡಿತಗೊಳಿಸುವುದು ಮತ್ತು ಇನ್ನೂ ಪರ್ಯಾಯ ಬೋಧನೆ ಕುರಿತಾಗಿ ಮನವಿಯನ್ನು ಎಲ್ಲ ಜಿಲ್ಲೆ, ತಾಲೂಕುಗಳ ಶಿಕ್ಷಕರ ಸಂಘದ ಮೂಲಕ ಆಯಾ ಕ್ಷೇತ್ರದ ಶಾಸಕರಿಗೆ ನೀಡುವಂತೆ ತಿಳಿಸಿದರೆ ಸರ್ಕಾರದ ಗಮನಕ್ಕೆ ತರಲು ಅನುಕೂಲವಾಗುತ್ತದೆ ಎಂದರು.

ಬಿಇಒ ಎಚ್.ಎನ್.ದೀಪಾ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಉಮಾಶಂಕರ್, ತಾಲೂಕು ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಜಿ.ಮಲ್ಲೇಶ್‌ಗೌಡ ಸೇರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net