

ನಂಜನಗೂಡು : ಆಟದಲ್ಲಿ ಸೋಲು, ಗೆಲುವು ಸಾಮಾನ್ಯ. ಈ ಸೋಲು, ಗೆಲುವನ್ನು ಆಟಗಾರರು ಸಮಾನವಾಗಿ ಸ್ವೀಕರಿಸಬೇಕು ಎಂದು ಉಪ್ಪಾರ ಸಮುದಾಯದ ಮುಖಂಡ ವಿಜಯಕುಮಾರ್ ತಿಳಿಸಿದರು.
ತಾಲೂಕಿನ ಹೆಮ್ಮರಗಾಲ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಭಾನುವಾರ ವಿಜಯಕುಮಾರ್ ಅಭಿಮಾನಿಗಳ ಬಳಗ ಹಾಗೂ ವಿಸ್ಮಯ ಕಬಡ್ಡಿ ತಂಡದ ವತಿಯಿಂದ ಗ್ರಾಮದ ಮನೆದೇವರ ಹಬ್ಬದ ಪ್ರಯುಕ್ತ ಆಯೋಜನೆ ಮಾಡಿದ್ದ ಎರಡು ದಿನಗಳ ಜಿಲ್ಲಾ ಮಟ್ಟದ ಗ್ರಾಮಾಂತರ ಕಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.
ವರ್ಷಗಳಿಂದಲೂ ಗ್ರಾಮದಲ್ಲಿ ಕಬಡ್ಡಿ ಪಂದ್ಯಾವಳಿಯನ್ನು ಬಹಳ ಅಚ್ಚುಕಟ್ಟಾಗಿ ಆಯೋಜನೆ ಮಾಡುತ್ತಿದ್ದಾರೆ. ಇಂತಹ ಕಾರ್ಯಕ್ರಮಗಳು ತಾಲೂಕು ಮಟ್ಟದಲ್ಲಿ ಹಾಗೂ ಜಿಲ್ಲೆ ಮಟ್ಟದಲ್ಲಿ ನಡೆಯಬೇಕು. ಇದಕ್ಕೆ ಬೇಕಾದ ಸಹಕಾರ ನೀಡುತ್ತೇನೆ ಎಂದರು.
ಜಿಲ್ಲಾ ಬಿಜೆಪಿ ಗ್ರಾಮಂತರ ಅಧ್ಯಕ್ಷ ಕುಂಬರಹಳ್ಳಿ ಸುಬ್ಬಣ್ಣ ಮಾತನಾಡಿ, ಹೆಮ್ಮರಗಾಲ ಗ್ರಾಮವು ಕ್ರೀಡೆಗಳಿಗೆ ಹೆಸರುವಾಸಿಯಾಗಿದೆ. ಎಲ್ಲರೂ ಕ್ರೀಡಾ ಮನೋಭಾವದಿಂದ ಆಟ ಆಡಬೇಕು. ಯಾವುದೇ ಗೊಂದಲಗಳಿಗೆ ಒಳಗಾಗದೆ ನಿಷ್ಪಕ್ಷಪಾತವಾಗಿ ತೀರ್ಪುಗಾರರು ಉತ್ತಮ ಕಾರ್ಯ ನಿರ್ವಹಿಸಬೇಕು ಎಂದರು.
ಗ್ರಾಮದ ಉಪ್ಪಾರ ಮುಖಂಡ ಹೆಮ್ಮರಗಾಲ ಸೋಮಣ್ಣ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿಂಧುವಳ್ಳಿ ಕೆಂಪಣ್ಣ, ಮುಖಂಡ ರೇವಣ್ಣ, ಬಿಜೆಪಿ ಮುಖಂಡ ಎಸ್.ಮಹದೇವಯ್ಯ, ನಾಗರತ್ನಮ್ಮ, ಮಾಯಪ್ಪ, ಬದನವಾಳು ರಾಮ, ಹಳೇಪುರ ರಂಗನಾಥ್, ರಾಜು, ನಂಜುಂಡಸ್ವಾಮಿ, ಗುರುರಾಜು ಮಸಗೆರಾಜು ಕರಿಯಪ್ಪ ಎಡದಲೇ ಪುಟ್ಟರಾಜ ನಾಯಕ, ಸಿದ್ದರಾಜು, ಮಲ್ಲೇಶ್ ಸೇರಿದಂತೆ ಗ್ರಾಮದ ಮುಖಂಡರು ವಿಸ್ಮಯ ಕಬಡ್ಡಿ ತಂಡದ ಸದಸ್ಯರು ಹಾಜರಿದ್ದರು.