

ಪಿರಿಯಾಪಟ್ಟಣ : ವಿದ್ಯಾರ್ಥಿಗಳು ಸಕ್ರಿಯವಾಗಿ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಭೌತಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಾಧ್ಯವಾಗಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಪ್ರಸನ್ನ ತಿಳಿಸಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕಸಬಾ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೈಹಿಕವಾಗಿ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಬಾಲ್ಯದಲ್ಲಿಯೇ ಕ್ರೀಡೆಗಳಲ್ಲಿ ಭಾಗವಹಿಸುವ ಮಕ್ಕಳ ಆರೋಗ್ಯವೂ ಉತ್ತಮವಾಗಿರುತ್ತದೆ. ಸೋಲು ಗೆಲುವು ಎಂಬುದು ಪ್ರತಿಯೊಂದು ಕ್ರೀಡೆಯಲ್ಲಿಯೂ ಇದ್ದೇ ಇರುತ್ತದೆ ಅದನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕಿದೆ ಎಂದರು.
ಮನುಷ್ಯನ ದೇಹವನ್ನು ಸದೃಢವಾಗಿ ಇಡುವುದರಲ್ಲಿ ಕ್ರೀಡೆಯೂ ಮುಖ್ಯ ಪಾತ್ರವಹಿಸುತ್ತದೆ, ಆದ್ದರಿಂದ ಯುವಕರು ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚೆಚ್ಚು ಭಾಗವಹಿಸಬೇಕು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಪ್ರತಿ ವರ್ಷವೂ ವಲಯ ಮಟ್ಟಗಳಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ಕ್ರೀಡೆಗಳನ್ನು ಹಮ್ಮಿಕೊಂಡು ಬರುತ್ತಿದೆ. ಗ್ರಾಮೀಣ ಭಾಗದಲ್ಲಿ ಉತ್ತಮ ಕ್ರೀಡಾಪಟುಗಳು ಇದ್ದು ಅಂತಹ ವಿದ್ಯಾರ್ಥಿಗಳನ್ನು ಗುರುತಿಸುವ ನಿಟ್ಟಿನಲ್ಲಿ ದೈಹಿಕ ಶಿಕ್ಷಕರು ಕೆಲಸ ನಿರ್ವಹಿಸಬೇಕಿದೆ ಎಂದರು.
ಕ್ರೀಡಾಕೂಟದ ಪ್ರಾಯೋಜಕರಾದ ಮಾನಸ ವಿದ್ಯಾಸಂಸ್ಥೆಯ ಅಧ್ಯಕ್ಷ ಸ್ವರೂಪ್, ಶಾಲಾ ಆಡಳಿತ ಮಂಡಳಿಯ ನಿರ್ದೇಶಕರಾದ ರೇಖಾ, ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪರಮಶಿವಯ್ಯ, ಶಾಲಾ ಪ್ರಾಂಶುಪಾಲ ಪ್ರಭಾಕರ್ ಸಿಂಗ್, ದೈಹಿಕ ಶಿಕ್ಷಣ ಪರಿವೀಕ್ಷಕ ರಮೇಶ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ, ಶಿಕ್ಷಕರಾದ ದೇವರಾಜ್, ಅನಿತಾ, ಶರ್ಮಿಳಾ, ರೇಖಾ ಸೇರಿದಂತೆ ಇತರರು ಹಾಜರಿದ್ದರು.