

ಬನ್ನೂರು: ಸೋಲು, ಗೆಲುವು ಎರಡು ಒಂದೇ ನಾಣ್ಯದ ಎರಡು ಮುಖಗಳು. ಸೋತಾಗ ಕುಗ್ಗದೆ ಗೆದ್ದಾಗ ಹಿಗ್ಗದೆ ಎರಡನ್ನೂ ಸಮನಾಗಿ ಸ್ವೀಕರಿಸಿದಾಗ ಮಾತ್ರವೇ ಯಶಸ್ಸು ಸಾಧ್ಯ ಎಂದು ಪರಿಸರ ಜಾಗೃತಿ ವೇದಿಕೆ ಅಧ್ಯಕ್ಷ ಮಹೇಂದ್ರಸಿಂಗ್ ಕಾಳಪ್ಪ ತಿಳಿಸಿದರು.
ಪಟ್ಟಣದ ಫುಟ್ಬಾಲ್ ಮೈದಾನದಲ್ಲಿ ನವಚೇತನ ಕ್ರಿಕೆಟರ್ಸ್ ವತಿಯಿಂದ ಆಯೋಜಿಸಿದ್ದ ಟಿ10 ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಬನ್ನೂರು ಶಾಂತಿಗೆ ಹೆಸರುವಾಸಿಯಾಗಿದೆ. ಇಲ್ಲಿ ಯಾವುದೇ ಕ್ರೀಡೆಯನ್ನು ನಡೆಸಿದರೂ ಅದು ಯಶಸ್ವಿಯಾಗುತ್ತದೆ. ಸೋತವರು ಹತಾಶರಾಗದೆ ಮುಂದಿನ ದಿನಗಳಲ್ಲೂ ತಮ್ಮ ತಂಡದೊಂದಿಗೆ ಕ್ರೀಡೆಯಲ್ಲಿ ಭಾಗವಹಿಸುವಂತೆ ಸಲಹೆ ನೀಡಿದರು.
ಮುಸ್ಲಿಂ ಮುಖಂಡ ಸೈಯದ್ ಜಮ್ರಾನ್ ಮಾತನಾಡಿ, ಇದೊಂದು ಸೌಹಾರ್ದ ಕ್ರೀಡಾಕೂಟವಾಗಿದ್ದು, ಉತ್ತಮ ಆಟವಾಡಿದ ತಂಡಕ್ಕೆ ಪ್ರಥಮ ಬಹುಮಾನ ದೊರಕಿದೆ. ಮುಂದಿನ ದಿನಗಳಲ್ಲೂ ಎಲ್ಲರೂ ಸಹಕಾರ ನೀಡುವಂತೆ ಕೋರಿದರು.
ನವಚೇತನ ಕ್ರಿಕೆಟರ್ಸ್ ವತಿಯಿಂದ ಆಯೋಜನೆಯಾದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ 8 ತಂಡಗಳು ಕ್ರೀಡೆಯಲ್ಲಿ ಪಾಲ್ಗೊಂಡಿದ್ದವು. ಬಸವನಹಳ್ಳಿ ಹಾಗೂ ನವಚೇತನ ಕ್ರಿಕೆಟರ್ಸ್ ನಡುವೆ ನಡೆದ ರೋಚಕ ಪಂದ್ಯದಲ್ಲಿ ಬಸವನಹಳ್ಳಿ ತಂಡ ಪ್ರಥಮ ಸ್ಥಾನ ಪಡೆದುಕೊಂಡಿತು. ಉತ್ತಮ ಬ್ಯಾಟರ್ ಪ್ರಶಸ್ತಿಯನ್ನು ಲಂಕೇಶ್ ಪಡೆದರೆ, ಉತ್ತಮ ಬೌಲರ್ ಪ್ರಶಸ್ತಿಯನ್ನು ಅಯಾಜ್ ಪಡೆದುಕೊಂಡರು. ಆಲ್‌ರೌಡರ್ ಪ್ರಶಸ್ತಿಯನ್ನು ಶಂಕರ್ ಪಡೆದರೆ ಸರಣಿಯ ಸರ್ವೋತ್ತಮ ಪ್ರಶಸ್ತಿಯನ್ನು ಶಂಕರ್ ಪಡೆದುಕೊಂಡರು.
ನವಚೇತನ ಕ್ರಿಕೆಟರ್ಸ್ ಅಧ್ಯಕ್ಷ ಶಶಿಕಿರಣ್, ಆಯೋಜಕ ಫಾರೂಕ್, ವಿವೇಕ, ವಿಕ್ಕಿ, ಇಮ್ರಾನ್, ವೈ.ಎಸ್.ರಾಮಸ್ವಾಮಿ, ರೇವಣ್ಣ, ಶುಹೇಬ್, ಆರೀಸ್, ಗುಂಡಣ್ಣ, ಶಂಕರ, ರಾಜು, ತೌಸಿಫ್, ಮೊಹಮ್ಮದ್ ಫರ್ಕಾನ್ ಸೇರಿದಂತೆ ಇತರರಿದ್ದರು.