

ನಾಗಮಂಗಲ: ಕ್ರೀಡಾ ಕ್ಷೇತ್ರದಲ್ಲಿ ಒಂದು ಬಾರಿ ಸೋಲು ಅನುಭವಿಸಿದ ನಂತರ ಕುಗ್ಗದೆ ಸೋಲು ಮತ್ತು ಗೆಲುವು ಎರಡನ್ನೂ ಸಮನಾಗಿ ಸ್ವೀಕರಿಸಿ ಮುಂದೆ ಸಾಗಿದರೆ ಮಾತ್ರ ಏನನ್ನಾದರೂ ಸಾಧಿಸಲು ಸಾಧ್ಯ ಎಂದು ಬಿಇಒ ಯೋಗೇಶ್ ಹೇಳಿದರು.
ತಾಲೂಕಿನ ದೇವಲಾಪುರದ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಹಂತದ ಹೋಬಳಿಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಯಾವ ಕ್ರೀಡಾಪಟು ಗೆಲುವಿನಂತೆ ಸೋಲನ್ನೂ ಸ್ವೀಕರಿಸಿ ಮಾನಸಿಕವಾಗಿ ಕುಗ್ಗದೆ ತನ್ನ ಕಠಿಣವಾದ ಅಭ್ಯಾಸವನ್ನು ಮುಂದುರಿಸುತ್ತಾನೋ ಆ ವ್ಯಕ್ತಿ ಮಾತ್ರ ಉತ್ತಮ ಕ್ರೀಡಾಪಟುವಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ ಎಂದರು.
ಕ್ರೀಡೆ ಎಂಬುದು ದೈಹಿಕ ಸದೃಢತೆಗೆ ಮಾತ್ರ ಸೀಮಿತವಾಗಿರದೆ ಮಾನಸಿ ಬೆಳವಣಿಗೆಗೂ ಸಹಕಾರಿ ಆಗಲಿದೆ. ಮಕ್ಕಳು ಶಾಲಾ ಅವಧಿಯಲ್ಲಿ ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗಿರದೆ ಅದರ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಂಡು ತಮ್ಮಲ್ಲಿರುವ ಪ್ರತಿಭೆ ಅನಾವರಣಗೊಳಿಸಬೇಕು ಎಂದರು. ಕ್ರೀಡೆಯ ಮೂಲಕ ತಾವು ಓದಿದ ಶಾಲೆ, ತಾಲೂಕು ಹಾಗೂ ಜಿಲ್ಲೆಯ ಕೀರ್ತಿ ಬೆಳಗಿಸುವ ಕೆಲಸ ಮಾಡಬೇಕು ಎಂದರು.
ಕ್ರೀಡಾಕೂಟದ ಅಧ್ಯಕ್ಷತೆಯನ್ನು ಶಾಲಾ ಸಮಿತಿ ಅಧ್ಯಕ್ಷ ಸುರೇಶ್ ವಹಿಸಿದ್ದರು. ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರುದ್ರೇಶ್, ಕಾರ್ಯದರ್ಶಿ ಮಂಜೇಗೌಡ ಶಿಕ್ಷಣ ಸಂಯೋಜಕ ಡಿ.ಪಿ.ಗಿರೀಶ್ ಮತ್ತು ಸಿದ್ದೇಶ್, ದೈಹಿಕ ಶಿಕ್ಷಕರಾದ ಸುರೇಶ್, ರತ್ನಮ್ಮ, ಮುಖ್ಯ ಶಿಕ್ಷಕ ನಾಗೇಗೌಡ ಇತರರಿದ್ದರು.