

ನವೀನ್ಚಂದ್ರ ಶೆಟ್ಟಿ ಆನೇಕಲ್
ಮುಂಗಾರು ಮಳೆ ತಡವಾಗಿ ಆರಂಭವಾದರೂ ರಾಗಿಯ ಕಣಜ ಆನೇಕಲ್ನಲ್ಲಿ 7300 ಹೆಕ್ಟರ್ನಲ್ಲಿ ರಾಗಿ ಬಿತ್ತನೆ ಮಾಡಲು ಬಿತ್ತನೆ ಬೀಜ ವಿತರಿಸಲಾಗಿದೆ. ಕರ್ನಾಟಕ ಗೃಹ ಮಂಡಳಿ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿ ಮತ್ತು ವಿಪ್ರೋ ಕಂಪನಿಗಳ ಸಾವಿರಾರು ಎಕರೆ ಭೂ ಸ್ವಾಧಿನದ ನಡುವೆಯೂ ಈ ಬಾರಿ ಮುಂಗಾರು ಹಂಗಾಮಿನ ಬಿತ್ತನೆ ಚುರುಕುಗೊಂಡಿದ್ದು, ಆನೇಕಲ್ ರಾಗಿಯ ಖ್ಯಾತಿ ಉಳಿಸಿಕೊಂಡಿದೆ.
ಈ ಬಾರಿ ಪೂರ್ವ ಮುಂಗಾರು ಮಳೆ ತಡವಾಗಿ ಆರಂಭವಾಯಿತಾದರೂ ಆಗಸ್ಟ್ ಆರಂಭದಿಂದ ಸೆಪ್ಟೆಂಬರ್ ಮೊದಲ ವಾರದೊಳಗೆ ಬಿತ್ತನೆ ಕಾರ್ಯ ಮೊದಲ ಹಂತದಲ್ಲಿ ನಿರೀೆಗೂ ಮೀರಿ ಹೆಚ್ಚಾಗಿದೆ.
ಆನೇಕಲ್ ಭಾಗದಲ್ಲಿ ವಾಡಿಕೆಗಿಂತ ಹೆಚ್ಚಾಗಿಯೇ ಈ ಬಾರಿ ಮಳೆಯಾಗಿದೆ. ಇದರಿಂದ ಊರ ಜಾತ್ರೆ, ಪರಿಷೆ ಪ್ರವಾಸದ ಗುಂಗಿನಿಂದ ಹೊರ ಬಂದ ರೈತರು ಹೊಲಗದ್ದೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆನೇಕಲ್ ಭಾಗದ ಜಿಗಣಿ, ಅತ್ತಿಬೆಲೆ, ಕಸಬಾ ಮತ್ತು ಸರ್ಜಾಪುರ ಹೋಬಳಿಗಳಲ್ಲಿ 382 ಹೆಕ್ಟರ್ ಪ್ರದೇಶದಲ್ಲಿ ನೀರಾವರಿ ಆಶ್ರಿತ ತೋಟಗಾರಿಕೆ ಭೂಮಿ ಇದ್ದು, ಮಳೆಯಾಶ್ರಿತ 5220 ಹೆಕ್ಟೇರ್ ಭೂಮಿ ಇದೆ. 7300 ಹೇಕ್ಟರ್ ರಾಗಿ ಕೃಷಿ: ಆನೇಕಲ್ನಲ್ಲಿ 7300 ಹೇಕ್ಟರ್ ಭೂಮಿಯಲ್ಲಿ ರಾಗಿಯನ್ನು ಪ್ರಧಾನವಾಗಿ ಶೇ.84 ಬೆಳೆಯಲಾಗುತ್ತದೆ, ಅದರಲ್ಲಿ ಶೇ.14 ದ್ವಿದಳ ಧಾನ್ಯ, ಸೂರ್ಯಕಾಂತಿ, ಹುಚ್ಚೆಳ್ಳು, ಎಳ್ಳು ಹರಳು ಮತ್ತು ಜೋಳ ಅಗತ್ಯಕ್ಕೆ ತಕ್ಕಂತೆ ಮಿಶ್ರಬಳಿಯಾಗಿ ರೈತರು ಬೆಳೆಯುತ್ತಾರೆ. ಪೂರ್ವ ಮುಂಗಾರು: 2024ರಲ್ಲಿ ವಾಡಿಕೆ ಮಳೆ ಮೇ ತಿಂಗಳಲ್ಲಿ 129.3 ಮಿಲಿ ಮೀಟರ್, ಹಂಗಾಮಿನಲ್ಲಿ ಜೂನ್ ಹಾಗೂ ಜುಲೈ ತಿಂಗಳಲ್ಲಿ 173.09 ಮಿಲಿ ಮೀಟರ್ ಮಳೆಯಾಗಿತ್ತು, ಈ ಬಾರಿ 2024&25ರ ಅವಧಿಯಲ್ಲಿ ಪೂರ್ವ ಮುಂಗಾರು ಮೇ ವರೆಗೆ 326.4 ಮಿಲಿ ಮೀಟರ್ ಮಳೆಯಾಗಿದ್ದು, ಮುಂಗಾರು ಜೂನ್, ಜುಲೈನಲ್ಲಿ 493.3 ಮಿಲಿಮೀಟರ್ ಮಳೆಯಾಗುವ ಮೂಲಕ ರಾಗಿ ಕೃಷಿಗೆ ಸಹಕಾರಿಯಾಗಿದೆ.
ಬಿತ್ತನೆ ಬೀಜಗಳ ವಿತರಣೆ : ರಾಗಿ ತಳಿಗಳಾದ ಎಂ.ಆರ್ 1, ಜಿಪಿಯು 28, ಎಂ.ಆರ್ 6,ಎಂ.ಎಲ್ 365, ಬೀಜಗಳನ್ನು ಸಂಗ್ರಹಿಸಿ ಇಡಲಾಗಿದೆ. ಆನೇಕಲ್ ಕೃಷಿ ಇಲಾಖೆ ವತಿಯಿಂದ ಕಳೆದ ಬಾರಿ ಬಿತ್ತನೆ ಬೀಜ ವಿತರಣೆಗೆ ಹೋಲಿಸಿದರೆ ಈ ವರ್ಷ ಮುಂಗಾರು ಹಂಗಾಮ ಅರ್ಧಕ್ಕಿಂತ ಹೆಚ್ಚು ವಿತರಣೆಯಾಗಿರುವುದನ್ನು ಗುರುತಿಸಬಹುದು. 2024ರಲ್ಲಿ ರಾಗಿ, ತೊಗರಿ, ಶೇಂಗಾ, ಮುಸುಕಿನ ಜೋಳ, ಅಲಸಂದೆ ಮತ್ತು ಅವರೆ ಜತೆಗೆ ಇತರ ಧಾನ್ಯಗಳು ಸೇರಿ ಸರಬರಾಜು 130 ಕ್ವಿಂಟಾಲ್ ಇದ್ದು, 101.60 ಕ್ವಿಂಟಾಲ್ ಇಡಿ ವರ್ಷಕ್ಕೆ ವಿತರಣೆಯಾಗಿತ್ತು. ಬೀಜ ನಿಗಮವು ಒಂದು ಹೆಕ್ಟೇರ್ ಪ್ರದೇಶಕ್ಕೆ 25 ಕಿಲೋ ಬೀಜವನ್ನು ನಿಗದಿಪಡಿಸಿದ್ದು, ಒಟ್ಟು ಲಭ್ಯತೆಯಲ್ಲಿ ಸರ್ಕಾರ ಶೇ.30 ಪೂರೈಕೆ ಮಾಡಲಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ರಸ ಗೊಬ್ಬರ ಲಭ್ಯತೆ : ಯೂರಿಯಾ 252 ಮೆಟ್ರಿಕ್ ಟನ್, ಡಿ.ಎ.ಪಿ 103.05, ಎಂಒಪಿ 22.75 ಮೆಟ್ರಿಕ್ ಟನ್, ಕಾಂಪ್ಲೆಕ್ಸ್ 427. 74 ಮೆಟ್ರಿಕ್ ಟನ್, ಎಸ್, ಎಸ್ ಪಿ 35.5 ಮೆಟ್ರಿಕ್ ಟನ್ ಲಭ್ಯವಿದೆ. 6900 ಹೆಕ್ಟೇರ್ನಲ್ಲಿ 5,800 ಹೆಕ್ಟೇರ್ ರಾಗಿ ಬೆಳೆಯುವುದರಿಂದ ಜುಲೈ ಅಂತ್ಯಕ್ಕೆ ಶೇ.64 ಬಿತ್ತನೆಯಾಗಿದೆ, ಆಗಸ್ಟ್ ಅಂತ್ಯಕ್ಕೆ, ಸೆಪ್ಟೆಂಬರ್ ಮೊದಲ ಭಾಗದಲ್ಲಿ ಬಿತ್ತನೆಯಾಗಲಿದೆ. ಹೆಕ್ಟೇರ್ಗೆ 28 ಕ್ವಿಂಟಾಲ್ ರಾಗಿ ಬೆಳೆಯಲಾಗುತ್ತದೆ. ಈ ಬಾರಿ ಮುಂಗಾರು ಬಿತ್ತನೆಗೆ ಎರಡೇ ತಿಂಗಳಲ್ಲಿ 123.60 ಕ್ವಿಂಟಾಲ್ ಬೀಜ ವಿತರಣೆಯಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿ ಧನಂಜಯ ವಿಜಯವಾಣಿಗೆ ತಿಳಿಸಿದ್ದಾರೆ.
ಈ ಬಾರಿ ಆನೇಕಲ್ ತಾಲೂಕಿನಲ್ಲಿ ಉತ್ತಮ ಮಳೆಯಾಗಿದೆ, ರಾಗಿ ಬೆಳೆ ಸೇರಿ ಇತರ ಬೆಳೆಗಳನ್ನು ಬೆಳೆಯಲು ಹೆಚ್ಚಿನ ಸಹಕಾರಿ ಆಗಿದೆ. ಭೂಮಿ ಸಂಪೂರ್ಣ ಫಲವತ್ತತೆ ಮಾಡಿಕೊಂಡು ರೈತರು ಬೆಳೆಗಳನ್ನು ಬೆಳೆಯಲು ಮುಂದಾಗಿದ್ದಾರೆ. ಕೆರೆ, ಕುಂಟೆಗಳಲ್ಲೂ ನೀರು ಬಂದಿದೆ. > ಮುರುಗೇಶ್ ಮಿಶ್ರ ಬೆಳೆ ರೈತ