

ಕಂಪ್ಲಿ: ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಕಾರ್ಯಕಾರಿ ಸಮಿತಿ ನಿರ್ದೇಶಕರ ಚುನಾವಣೆ ಪ್ರಕ್ರಿಯೆ ಬಿರುಸಿನಿಂದ ಸಾಗಿದೆ. ಅ.18ನಾಮಪತ್ರ ಸಲ್ಲಿಸಲು ಕಡೆದಿನವಾಗಿದ್ದು, ಅ.19ನಾಮಪತ್ರ ಪರಿಶೀಲನೆ, ಅ.21ರಂದು ವಾಪಸ್ ಪಡೆಯುವಿಕೆ, ಅ.28ರಂದು ಚುನಾವಣೆ ನಡೆಯಲಿದೆ. ಒಟ್ಟು 15ಮತದಾನ ಕ್ಷೇತ್ರಗಳಿಂದ 520 ಮತದಾರರನ್ನೊಂದಿದ್ದು, 25ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಚುನಾವಣಾಧಿಕಾರಿಯಾಗಿ ನಿವೃತ್ತ ಮುಖ್ಯಶಿಕ್ಷಕ ವಿ.ಪಕ್ಕೀರಪ್ಪ, ಸಹಾಯಕರಾಗಿ ರೇಣುಕಾರಾಧ್ಯ, ಚಂದ್ರಯ್ಯ ಸೊಪ್ಪಿಮಠ ಕಾರ್ಯನಿರ್ವಹಿಸುತ್ತಿದ್ದಾರೆ.
ಕೃಷಿ ಇಲಾಖೆಯ 13 ಮತದಾರರು, ಪಶುಪಾನಾ 11, ಕಂದಾಯ 35, ಲೋಕೋಪಯೋಗಿ 13, ಸರ್ಕಾರಿ ಪ್ರಾಥಮಿಕ ಶಾಲೆ 211, ಸರ್ಕಾರಿ ಪ್ರೌಢಶಾಲೆ 74, ಸರ್ಕಾರಿ ಪಿಯು ಮತ್ತು ಪದವಿ ಕಾಲೇಜು 23, ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಇಲಾಖೆ 13, ಆರೋಗ್ಯ 54, ಖಜಾನೆ 5, ಭೂಮಾಪನ 4, ಗ್ರಾಮೀಣಾಭಿವೃದ್ಧಿ 23, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ 5, ಅಬಕಾರಿ ಇಲಾಖೆ 5, ತಾಂತ್ರಿಕ ಶಿಕ್ಷಣ ಇಲಾಖೆ 31ಸೇರಿ ಒಟ್ಟು 520ಮತದಾರರಿದ್ದಾರೆ. ಇದರಲ್ಲಿ 211 ಮತದಾರರನ್ನೊಂದಿದ ಪ್ರಾಥಮಿಕ ಶಾಲಾ ಮತದಾರ ಕ್ಷೇತ್ರಕ್ಕೆ ಒಟ್ಟು ಮೂರು ಸ್ಥಾನ ಮೀಸಲಿರಿಸಿದೆ. ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿ ಹೋರಾಟ ನಡೆಸುವ ಮೂವರು ಶಿಕ್ಷಕರನ್ನು ಅವಿರೋಧ ಆಯ್ಕೆಗೊಳಿಸಬೇಕೆಂಬುದು ಹಿರಿಯ ಶಿಕ್ಷಕರ ಅಭಿಮತ.
ಸರ್ಕಾರಿ ಪ್ರಾಥಮಿಕ ಶಾಲೆಯ ಮೂರುಸ್ಥಾನಗಳಿಗೆ ಹನುಮಂತಪ್ಪ, ನಾಗನಗೌಡರ ಬಣಗಳಿಗೆ ತಲಾ ಒಂದೊಂದು, ಜಿಪಿಟಿ ಶಿಕ್ಷಕರಿಗೆ ಒಂದು ಸ್ಥಾನದಂತೆ ಆಯ್ಕೆ ಮಾಡಿದ್ದಾರೆ. ಆದರೆ, ಈ ಕ್ರಮ ಕೆಲ ಶಿಕ್ಷಕರ ಕೆಂಗಣ್ಣಿಗೆ ಗುರಿಯಾಗಿದೆ. ಕೆಲವೇ ಶಿಕ್ಷಕರು ಸಭೆ ಸೇರಿ ಮೂವರನ್ನು ಆಯ್ಕೆ ಮಾಡಿದ್ದು ಎಷ್ಟು ಸರಿ? ಎನ್ನುವ ಭಿನ್ನಾಭಿಪ್ರಾಯ ಕೇಳಿ ಬರುತ್ತದೆ.
ಎಲ್ಲರ ಮನವೊಲಿಸಿ ಅವಿರೋಧ ಆಯ್ಕೆಗೊಳಿಸಲಿದೆ ಎಂಬುದು ಹಿರಿಯ ಶಿಕ್ಷಕರು ಅಂಬೋಣ. 80ಕ್ಕೂ ಅಧಿಕ ಜನ ಜಿಪಿಟಿ ಶಿಕ್ಷಕರಿದ್ದು ನಾವೆಲ್ಲ ಸಭೆ ಸೇರಿ ಸರ್ವಾನುಮತದಿಂದ ಕೆ.ಎಂ.ಸರ್ವೇಶರನ್ನು ಆಯ್ಕೆ ಮಾಡಿದ್ದೇವೆ ಎಂದು ಜಿಪಿಟಿ ಸಂಘದ ಅಧ್ಯಕ್ಷ ಮಂಜುನಾಥ ತಿಳಿಸಿದ್ದಾರೆ.