ಭೂ ಖರೀದಿ ಪ್ರಕ್ರಿಯೆ ಚುರುಕುಗೊಳಿಸಿ

2ark4
Published on

ಅರಕಲಗೂಡು: ತಾಲೂಕಿನಲ್ಲಿ ಕುಂಟುತ್ತಾ ಸಾಗಿರುವ ಮಾಗಡಿ- ಸೋಮವಾರಪೇಟೆ ಮಾರ್ಗದ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಖರೀದಿ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕು ಎಂದು ಕೆ-ಶಿಫ್ ಯೋಜನೆಯ ವಿಶೇಷ ಜಿಲ್ಲಾಧಿಕಾರಿ ನಾಗೆಂದ್ರಪ್ರಸಾದ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಟ್ಟಣದ ಮಿನಿ ವಿಧಾನಸೌಧ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ರಸ್ತೆ ನಿರ್ಮಾಣ ಯೋಜನೆಯ ಪ್ರಕ್ರಿಯೆ ಪೂರ್ಣಗೊಂಡಿದ್ದು ಶೇ 80ರಷ್ಟು ಜಮೀನನ್ನು ಗುತ್ತಿಗೆದಾರರಿಗೆ ಹಸ್ತಾಂತರ ಮಾಡಿದರೆ ಕಾಮಗಾರಿ ಪ್ರಾರಂಭವಾಗುತ್ತದೆ. ತಾಲೂಕಿನಲ್ಲಿ ಶೇ 50ರಷ್ಟು ಭೂ ಖರೀದಿ ಪ್ರಕ್ರಿಯೆ ನಡೆದಿದ್ದು ಜ 15ರೊಳಗೆ ಶೇ 80ರ ಗುರಿ ತಲುಪುವುದು ಕಡ್ಡಾಯ. ಈ ಹಿನ್ನೆಲೆಯಲ್ಲಿ ಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ನೌಕರರು ಹೆಚ್ಚಿನ ಮುತುವರ್ಜಿ ವಹಿಸಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.

ರೈತರ ಸಮ್ಮತಿ ಇರುವ ಭೂಮಿ ಖರೀದಿ ಪ್ರಕ್ರಿಯೆಯನ್ನು ತ್ವರಿತವಾಗಿ ಮುಗಿಸುವಂತೆ ಹಾಗೂ ಭೂಮಿ ಕೊಡಲು ಒಪ್ಪದ ರೈತರಿಗೆ ರಸ್ತೆ ಅಭಿವೃದ್ಧಿಯಿಂದ ಆಗಲಿರುವ ಪ್ರಯೋಜನಗಳ ಕುರಿತು ವಿವರಿಸಿ ಮನವೊಲಿಸುವಂತೆ ತಿಳಿಸಿದರು.

166 ಕಿ,.ಮೀ. ಉದ್ದದ ಈ ರಸ್ತೆ ನಿರ್ಮಾಣಕ್ಕೆ ತಾಲೂಕಿನಲ್ಲಿ 59.22 ಎಕರೆ ಭೂಮಿ ಅಗತ್ಯವಾಗಿದೆ. ಇದರಲ್ಲಿ 2.33ಎಕರೆ ಸರ್ಕಾರಿ ಜಮೀನಾಗಿದ್ದು ಉಳಿದ ಜಮೀನನ್ನು ರೈತರಿಂದ ಖರೀದಿ ಮಾಡಲಾಗುತ್ತಿದೆ. 5 ವರ್ಷಗಳಲ್ಲಿ ನೋಂದಣಿಯಾದ ಅತ್ಯಂತ ಹೆಚ್ಚಿನ ಮೊತ್ತ ಹಾಗೂ ಮಾರುಕಟ್ಟೆ ದರಗಳನ್ನು ತುಲನೆ ಮಾಡಿ ಎರಡರಲ್ಲಿ ಯಾವುದು ಹೆಚ್ಚೋ ಅದರ ನಾಲ್ಕರಷ್ಟು ದರ ನಿಗದಿಪಡಿಸಿ ರೈತರಿಂದ ಭೂ ಮಿ ಖರೀದಿ ಮಾಡಲಾಗುತ್ತಿದೆ ಎಂದು ಸುದ್ದಿಗಾರರಿಗೆ ಮಾಹಿತಿ ನೀಡಿದರು.

ತಾಲೂಕಿನಲ್ಲಿ 32ಕಿ.ಮೀ. ರಸ್ತೆ ಹಾದು ಹೋಗಲಿದ್ದು ರಾಮನಾಥಪುರ ಮತ್ತು ಕೊಣನೂರು ಹೋಬಳಿಗಳ 14 ಗ್ರಾಮಗಳ ವ್ಯಾಪ್ತಿಯಲ್ಲಿ 29.18 ಎಕರೆ ಖರೀದಿ ಪ್ರಕ್ರಿಯೆ ಮುಗಿದಿದೆ. ಇನ್ನು 26 ಎಕರೆ ಪ್ರದೇಶದ ಖರೀದಿ ಕಾರ್ಯ ನಡೆಯಬೇಕಿದೆ. ಗುಣಮಟ್ಟದ ದ್ವಿಪಥ ರಸ್ತೆ ನಿರ್ಮಾಣವಾಗಲಿದ್ದು ಈ ಭಾಗದ ಜನರು ಶೀಘ್ರವಾಗಿ ಬೆಂಗಳೂರಿಗೆ ತೆರಳಲು ಅನುಕೂಲವಾಗಲಿದೆ.ಅಲ್ಲದೆ ರೈತರ ಉತ್ಪನ್ನಗಳನ್ನು ರಾಜಧಾನಿಗೆ ಕೊಂಡೊಯ್ಯಲು ನೆರವಾಗಲಿದ್ದು ರೈತರ ಜಮೀನಿಗೂ ಉತ್ತಮ ಬೆಲೆ ಬರಲಿದೆ. ರೈತರು ಜಮೀನು ನೀಡುವ ಮೂಲಕ ರಸ್ತೆ ನಿರ್ಮಾಣ ಕಾರ್ಯಕ್ಕೆ ಸಹಕಾರ ನೀಡುವಂತೆ ಮನವಿ ಮಾಡಿದರು.

ಸಕಲೇಶಪುರ ಉಪವಿಭಾಗಾಧಿಕಾರಿ ಗಿರೀಶ್ ನಂದನ್, ತಹಸೀಲ್ದಾರ್ ವೈ.ಎಂ. ರೇಣುಕುಮಾರ್, ಗ್ರೇಡ್- 2 ತಹಸೀಲ್ದಾರ್ ಎಚ್.ಟಿ. ಪಾರ್ಥಸಾರಥಿ, ತಾಪಂ ಇಒ ಎನ್. ರವಿ ಕುಮಾರ್, ರಾಮನಾಥಪುರದ ರಾಜಸ್ವ ನಿರೀಕ್ಷಕಸ್ವಾಮಿ ಮೊದಲಾದವರು ಹಾಜರಿದ್ದರು.


2ಎಆರ್‌ಕೆ4..
ಅರಕಲಗೂಡಿನಲ್ಲಿ ಕೆ-ಶಿಫ್ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ಜರುಗಿತು. ಯೋಜನೆಯ ವಿಶೇಷ ಜಿಲ್ಲಾಧಿಕಾರಿ ನಾಗೆಂದ್ರ ಪ್ರಸಾದ್, ಸಕಲೇಶಪುರ ಉಪವಿಭಾಗಾಧಿಕಾರಿ ಗಿರೀಶ್ ನಂದನ್, ತಹಸೀಲ್ದಾರ್ ವೈ.ಎಂ. ರೇಣುಕುಮಾರ್, ಗ್ರೇಡ್ 2 ತಹಸೀಲ್ದಾರ್ ಎಚ್.ಟಿ. ಪಾರ್ಥಸಾರಥಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net