ಎಸಿಬಿ ಬಲೆಗೆ ಬಿದ್ದ ಸದಲಗಾ ಪುರಸಭೆ ಬಿಲ್ ಕಲೆಕ್ಟರ್

Arrest Kaidhi
Published on

ಬೆಳಗಾವಿ: ಚಿಕ್ಕೋಡಿ ತಾಲೂಕಿನ ಸದಲಗಾ ಪುರಸಭೆಯಲ್ಲಿ ಹೊಸ ಉತಾರ ನೀಡಲು 9 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಗುರುವಾರ
ಎಸಿಬಿ ಬಲೆಗೆ ಸಿಕ್ಕಿಬಿದ್ದಿದ್ದಾರೆ.

ಅಶೋಕ ಎನ್. ಹೆಗಡೆ ಎಸಿಬಿ ಬಲೆಗೆ ಸಿಲುಕಿದ ಬಿಲ್ ಕಲೆಕ್ಟರ್. ಸರ್ಕಾರದ ಆಶ್ರಯ ಯೋಜನೆಯಡಿ ಮಂಜೂರಾದ ಮನೆಯ ಭೋಜಾ ಕಡಿಮೆ ಮಾಡಿ ಮನೆಗೆ ತಂದೆಯ ಹೆಸರು ದಾಖಲು ಮಾಡಲು ಹಾಗೂ ಬಳಿಕ ಹೊಸ ಉತಾರ ನೀಡಲು 15 ಸಾವಿರ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಅಂತಿಮವಾಗಿ 9 ಸಾವಿರ ರೂ. ನೀಡಿದರೆ ಮಾತ್ರ ದಾಖಲೆ ನೀಡುವುದಾಗಿ ಹೇಳಿದ್ದರು ಎಂದು ಸದಲಗಾದ ಶಿವಾನಂದ ಕರಂಗಳೆ ಎಂಬುವರು ಎಸಿಬಿಗೆ ದೂರು ನೀಡಿದ್ದರು.

ಎಸಿಬಿ ಉಪಾಧೀಕ್ಷಕ ಶರಣಪ್ಪ, ಪೊಲೀಸ್ ಇನ್‌ಸ್ಪೆಕ್ಟರ್ ಎಚ್.ಸುನೀಲಕುಮಾರ್, ಎ.ಎಸ್. ಗೂದಿಗೊಪ್ಪ ನೇತೃತ್ವದ ತಂಡ ಗುರುವಾರ ದಾಳಿ ನಡೆಸಿ, ಪುರಸಭೆಯ ಬಿಲ್ ಕಲೆಕ್ಟರ್ 9 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಸಿಬಿ ಉತ್ತರ ವಲಯದ ಪೊಲೀಸ್ ಅಧೀಕ್ಷಕ ಬಿ.ಎಸ್.ನೇಮಗೌಡ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net